ADVERTISEMENT

ಮುಳ್ಳಯ್ಯನಗಿರಿಯಲ್ಲಿ ಬೃಹತ್ ರೆಸಾರ್ಟ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST

ಚಿಕ್ಕಮಗಳೂರು: ಬಡವರು ಒಂದು ಸೂರು ಕಟ್ಟಿಕೊಳ್ಳಲು ಹತ್ತಾರು ಇಲಾಖೆಯಲ್ಲಿ ನಿರಾಕ್ಷೇಪಣಾ ಪತ್ರ ಪಡೆಯಬೇಕಾದ ವ್ಯವಸ್ಥೆ ಜಾರಿಯಲ್ಲಿರುವಾಗ ಅತ್ಯಂತ ಸೂಕ್ಷ್ಮ ಪರಿಸರ ಮತ್ತು ರಾಜ್ಯದಲ್ಲೇ ಅತಿ  ಎತ್ತರದ ಗಿರಿಶಿಖರವೆನಿಸಿದ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಖಾಸಗಿ ಸಂಸ್ಥೆಯೊಂದು ಅಂತರರಾಷ್ಟ್ರೀಯ ಮಟ್ಟದ ರೆಸಾರ್ಟ್ ನಿರ್ಮಿಸುತ್ತಿದೆ. ಜಿಲ್ಲಾಡಳಿತ ಒಂದೇ ಒಂದು ಆಕ್ಷೇಪಣೆ ಇಲ್ಲದೆ ಖಾಸಗಿ ಸಂಸ್ಥೆಗೆ ಬಹುಕೋಟಿ ವೆಚ್ಚದ ರೆಸಾರ್ಟ್ ನಿರ್ಮಿಸಲು ಹಸಿರು ನಿಶಾನೆ ತೋರಿರುವ ಬಗ್ಗೆ ಸ್ಥಳೀಯ ಪರಿಸರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

ಕೆಎಸ್‌ಎಸ್ ಹೋಟೆಲ್ ಅಂಡ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಬರುವ ಚನ್ನಗೊಂಡನಹಳ್ಳಿ-ಪಂಡರವಳ್ಳಿ ಗ್ರಾಮದ ಸರ್ವೆ ನಂಬರ್ 344 ಮತ್ತು 216ರಲ್ಲಿ ಒಟ್ಟು 7 ಎಕರೆ 10 ಗುಂಟೆ ಜಾಗದಲ್ಲಿ ಬಹುಕೋಟಿ ವೆಚ್ಚದಲ್ಲಿ ಬೃಹತ್ ರೆಸಾರ್ಟ್ ನಿರ್ಮಾಣ ಕಾಮಗಾರಿಯನ್ನು ಭರದಿಂದ ನಡೆಸುತ್ತಿದೆ.

ಈಗಾಗಲೇ 8 ವಿಲ್ಹಾ (ಸ್ವತಂತ್ರ ವಿಲಾಸಿ ಮನೆ) ಗಳನ್ನು ನಿರ್ಮಿಸಲಾಗಿದೆ. ಬೃಹತ್ ಪಿಲ್ಲರ್ ಹಾಕಿ, ಬಹುಮಹಡಿಯ ಹೋಟೆಲ್ ನಿರ್ಮಾಣವೂ ಭರದಿಂದ ಸಾಗಿದೆ. ಇನ್ನೂ 12 ವಿಲ್ಹಾಗಳನ್ನು ನಿರ್ಮಿಸಲು ತಳಪಾಯ ಹಾಕಲಾಗುತ್ತಿದೆ.

ರೆಸಾರ್ಟ್ ನಿರ್ಮಿಸುತ್ತಿರುವ ಜಾಗದಲ್ಲಿ ನೈಸರ್ಗಿಕವಾಗಿ ಹರಿಯುವ ನೀರಿನ ಮೂಲಗಳು ಇವೆ. ಅಲ್ಲದೆ ಕಣ್ಣಳತೆ ದೂರದಲ್ಲೇ ಭದ್ರಾ ಹುಲಿ ಸಂರಕ್ಷಣಾ ಪ್ರದೇಶ ಮತ್ತು  ಮಸಗಲಿ ರಕ್ಷಿತಾ ಅರಣ್ಯಗಳಿವೆ. ಧಾರ್ಮಿಕ ಕ್ಷೇತ್ರಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ರುದ್ರಗಿರಿ ಇವೆ. ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡುವಾಗ ಇದನ್ನು ಪರಿಗಣಿಸದೆ ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಈ ಜಮೀನಿನ ಹತ್ತಿರ ಯಾವುದೇ ದೇವಸ್ಥಾನ, ಚರ್ಚ್, ಮಸೀದಿಗಳು ಇರುವುದಿಲ್ಲವೆಂದು ತಹಶೀಲ್ದಾರ್ ಕೂಡ ವರದಿ ನೀಡಿದ್ದಾರೆ. ಸ್ಥಳೀಯ ತಳಿಹಳ್ಳ ಗ್ರಾಮ ಪಂಚಾಯಿತಿ ಆಡಳಿತ ಕೂಡ ಗ್ರಾಮಸ್ಥರ ತಂಟೆ ತಕರಾರು ಇರುವುದಿಲ್ಲವೆಂದು ನಿರಾಕ್ಷೇಪಣಾ ಪತ್ರ ಒದಗಿಸಿದೆ ಎಂದು ದೂರುತ್ತಾರೆ ಪರಿಸರ ಸಂಘಟನೆಗಳ ಸ್ಥಳೀಯ ಮುಖಂಡರು.

ನೀರಿನ ಬಳಕೆ, ಜಮೀನಿನ ಮೂಲ ನಕಾಶೆ, ರೆಸಾರ್ಟ್‌ನಲ್ಲಿ ನಿತ್ಯ ಉತ್ಪಾದನೆಯಾಗುವ ತ್ಯಾಜ್ಯ ನಿರ್ವಹಣೆ ಬಗ್ಗೆ ಯಾವುದೇ ಮಾಹಿತಿಯನ್ನು ಜಿಲ್ಲಾಡಳಿತ ನೀಡುತ್ತಿಲ್ಲ. ಖಾಸಗಿ ಕಂಪನಿಗೆ ಅಂತರರಾಷ್ಟ್ರೀಯ ಮಟ್ಟದ ರೆಸಾರ್ಟ್ ನಿರ್ಮಿಸಲು ಜಿಲ್ಲಾಡಳಿತ ಅನುಮತಿ ನೀಡಿದ್ದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ ಜಿಲ್ಲೆಯ ಪರಿಸರವಾದಿಗಳು.

`ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವಾಗ ಒಟ್ಟು ರೂ 4.36 ಕೋಟಿ ವೆಚ್ಚದಲ್ಲಿ 30 ವಿಲ್ಹಾಗಳ ರೆಸಾರ್ಟ್ ನಿರ್ಮಿಸಲು ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ನಿರಾಕ್ಷೇಪಣಾ ಪತ್ರ ನೀಡಲಾಗಿದೆ. ವಾಸ್ತವದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ನಾವು ಅನುಮತಿ ನೀಡಿಲ್ಲ. ಏಕಗವಾಕ್ಷಿ ಯೋಜನೆಯಡಿ ಕೇಂದ್ರ ಕಚೇರಿಯಿಂದಲೇ ಅನುಮತಿ ಪಡೆದಿದ್ದಾರೆ~ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ಅನಿಲ್ ಕುಮಾರ್ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.

`ರೆಸಾರ್ಟ್ ಅಥವಾ ಹೋಮ್‌ಸ್ಟೇಗಳ ನಿರ್ಮಾಣಕ್ಕಾಗಿ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದಾಗ ಅವುಗಳನ್ನು ಅರಣ್ಯ ಇಲಾಖೆ ಗಮನಕ್ಕೆ ತರಬೇಕು. ಜಿಲ್ಲಾಡಳಿತ ಅಂತಹ ಅರ್ಜಿಗಳನ್ನು ನಮ್ಮ ಗಮನಕ್ಕೆ ತಂದರೆ ಖುದ್ದು ಸ್ಥಳ ಪರಿಶೀಲಿಸುತ್ತೇವೆ. ಅರಣ್ಯ ಮತ್ತು ಪರಿಸರಕ್ಕೆ ಧಕ್ಕೆಯಾಗುವಂತಿದ್ದರೆ ಆರಂಭದಲ್ಲೇ ಅಂತಹ ಕಾಮಗಾರಿಗಳನ್ನು ತಡೆಯಲು ಸಾಧ್ಯವಾಗುತ್ತದೆ. ಚನ್ನಗೊಂಡನಹಳ್ಳಿಯಲ್ಲಿ ನಿರ್ಮಿಸುತ್ತಿರುವ ಬಹುಕೋಟಿ ವೆಚ್ಚದ ಬೃಹತ್ ರೆಸಾರ್ಟ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ದೂರುಗಳು ಬಂದರೆ ಕ್ರಮ ಕೈಗೊಳ್ಳುತ್ತೇವೆ~ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶನ್. `ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್‌ಗಳಿಗೆ ಜಿಲ್ಲಾಡಳಿತ ಅನುಮತಿ ನೀಡಬಾರದು. ಪರಿಸರಕ್ಕೆ ಧಕ್ಕೆಯಾಗುವಂತೆ ನಿರ್ಮಿಸುತ್ತಿದ್ದ ಸಟೋರಿ ರೆಸಾರ್ಟ್, ಬ್ರಿಗೇಡ್ ರೆಸಾರ್ಟ್, ವಿಲ್ಡರ್‌ನೆಸ್ ರೆಸಾರ್ಟ್, ಅವಾಂತ ಗಾರ್ಡೆ ಸೇರಿದಂತೆ ಆರು ರೆಸಾರ್ಟ್‌ಗಳ ಮೂಲ ಅನುಮತಿಯನ್ನು ಜಿಲ್ಲಾಧಿಕಾರಿ ರದ್ದುಪಡಿಸಿ ಸ್ವಾಗತಾರ್ಹ ನಿರ್ಧಾರ ಕೈಗೊಂಡಿದ್ದರು. ಶೋಲಾ ಅರಣ್ಯ ಮತ್ತು ಹುಲ್ಲುಗಾವಲು, ನೈಸರ್ಗಿಕ ಜಲಮೂಲ, ಭದ್ರಾ ಅಭಯಾರಣ್ಯದ ಪ್ರಶಾಂತತೆಗೆ ಧಕ್ಕೆಯಾಗುವ ರೀತಿಯಲ್ಲಿ ತಲೆ ಎತ್ತುತ್ತಿರುವ ಕೆಎಸ್‌ಎಸ್ ಹೋಟೆಲ್ ಅಂಡ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್‌ನ ಬೃಹತ್ ರೆಸಾರ್ಟ್ ಯೋಜನೆಯನ್ನು ಜಿಲ್ಲಾಡಳಿತ ತಕ್ಷಣವೇ ರದ್ದುಪಡಿಸಬೇಕು~ ಎಂದು ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಡಿ.ವಿ.ಗಿರೀಶ್, ವೈಲ್ಡ್ ಕ್ಯಾಟ್-ಸಿ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಶ್ರೀದೇವ್ ಹುಲಿಕೆರೆ ಒತ್ತಾಯಿಸಿದ್ದಾರೆ.

ಅತಿ ಸೂಕ್ಷ್ಮ ಪರಿಸರವೆನಿಸಿದ ಪಶ್ಚಿಮಘಟ್ಟದ ಗಿರಿಶ್ರೇಣಿಯಲ್ಲಿ ಬೃಹತ್ ರೆಸಾರ್ಟ್, ಹೋಂ ಸ್ಟೇಗಳು ದಿನದಿನಕ್ಕೂ ನಾಯಿಕೊಡೆಯಂತೆ ತಲೆಎತ್ತುತ್ತಿವೆ. ಜಿಲ್ಲಾಡಳಿತ ಯಾವುದೇ ಆಕ್ಷೇಪವಿಲ್ಲದೆ ಅನುಮತಿ ನೀಡುತ್ತಿದೆ.


  
 
 


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.