ADVERTISEMENT

ಮೈಸೂರು: ದಂಡ ಪಾವತಿಸಲಾಗದೆ ಬೈಕ್‌ ಒಪ್ಪಿಸಿದ!

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2017, 4:31 IST
Last Updated 31 ಅಕ್ಟೋಬರ್ 2017, 4:31 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಜಿ.ಬಿ.ನಾಗರಾಜ್‌

ಮೈಸೂರು: ಸಂಚಾರ ನಿಯಮಗಳನ್ನು 201 ಬಾರಿ ಉಲ್ಲಂಘಿಸಿ ₹20 ಸಾವಿರ ದಂಡ ಪಾವತಿಸಲು ಸಾಧ್ಯವಾಗದ ಸವಾರರೊಬ್ಬರು ದ್ವಿಚಕ್ರ ವಾಹನವನ್ನೇ ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಹನಹರಾಜು ಹಾಕಿ ದಂಡದ ಮೊತ್ತತುಂಬಿಕೊಳ್ಳಲು ಸಿದ್ಧಾರ್ಥಗರ ಸಂಚಾರ ಠಾಣೆ ಪೊಲೀಸರು ಮುಂದಾಗಿದ್ದಾರೆ.

ರಾಜೀವನಗರದ ಕೂಲಿ ಕಾರ್ಮಿಕ ರೋಷನ್‌ ಅಲಿ ಬೇಗ್‌ ಸಂಚಾರ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಒಪ್ಪಿಸಿದವರು. ಅವರ ಬಜಾಜ್‌ ಪ್ಲಾಟಿನಾ (ಕೆ.ಎ. 55 ಇ 4785) ಬೈಕಿನ ಮೌಲ್ಯ ₹ 10,000 ಎಂದು ಅಂದಾಜಿಸಿರುವ ಪೊಲೀಸರು ಹರಾಜು ಪ್ರಕ್ರಿಯೆಗೆ ರೋಷನ್‌ ಅವರ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ.

ADVERTISEMENT

ಆ.19ರಂದು ರಾತ್ರಿ ನಗರದ ಮಿರ್ಜಾ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುವಾಗ ರೋಷನ್‌ ಅಲಿ ಸಿಕ್ಕಿ ಬಿದ್ದಿದ್ದರು. ಒಂದೂವರೆ ವರ್ಷದಿಂದ ಹೆಲ್ಮೆಟ್‌ ಧರಿಸದೆ ಬೈಕ್‌ ಚಾಲನೆ ಮಾಡಿದ್ದರು. ತ್ರಿಬಲ್‌ ರೈಡಿಂಗ್‌, ಸಿಗ್ನಲ್‌ ಜಂಪ್‌, ಅತಿ ವೇಗ, ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ, ಚಾಲನೆ ವೇಳೆ ಮೊಬೈಲ್‌ ಫೋನ್‌ ಬಳಕೆ ಸೇರಿ ಹಲವು ರೀತಿಯ ಸಂಚಾರ ನಿಯಮ ಉಲ್ಲಂಘಿಸಿದ್ದು ಗೊತ್ತಾಗಿತ್ತು.

ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿತ್ತು. ಈ ಸಂಬಂಧ ಬೈಕ್‌ ಮಾಲೀಕರ ಮನೆಗೆ ನೋಟಿಸ್‌ ರವಾನೆ ಮಾಡಲಾಗಿತ್ತು. ಮತ್ತೊಬ್ಬರಿಂದ ಬೈಕ್‌ ಖರೀದಿಸಿದ್ದ ರೋಷನ್‌, ವಿಳಾಸ ಬದಲಿಸಿಕೊಳ್ಳದ ಪರಿಣಾಮ ನೋಟಿಸ್‌ ಜಾರಿಯಾಗಿದ್ದು ಗಮನಕ್ಕೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರತಿ ಬಾರಿ ಸಂಚಾರ ನಿಯಮ ಉಲ್ಲಂಘನೆಗೆ ₹ 100ರಂತೆ ₹ 20,100 ದಂಡ ಪಾವತಿಸುವಂತೆ ಸೂಚಿಸಿದ್ದೆವು. ಠಾಣೆಗೆ ಧಾವಿಸಿ ದಂಡ ಕಟ್ಟಿ ಬೈಕ್‌ ಬಿಡಿಸಿಕೊಳ್ಳುವುದಾಗಿ ಹೇಳಿ ಹೋದ ರೋಷನ್‌ ಎರಡು ತಿಂಗಳಿಂದ ಪತ್ತೆಯಿಲ್ಲ. ದ್ವಿಚಕ್ರ ವಾಹನ ಮಾರಾಟ ಮಾಡಿದರೂ ದಂಡದ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ. ಆದರೆ, ದಂಡದ ಮೊತ್ತ ಸಂಗ್ರಹಿಸುವ ಹೊಣೆ ನಮ್ಮದು. ಹೀಗಾಗಿ, ವಾಹನ ಹರಾಜು ಹಾಕಿ ಪ್ರಕ
ರಣ ವಿಲೇವಾರಿ ಮಾಡಲು ನೋಟಿಸ್‌ ಜಾರಿ ಮಾಡಿದ್ದೇವೆ’ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

7,622 ವಾಹನ: 7,622 ವಾಹನಗಳು 20ಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿವೆ ಎಂಬುದು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿರುವ ಆಟೊಮೇಷನ್‌ ಕೇಂದ್ರದ ಮಾಹಿತಿ. ಇದರಲ್ಲಿ ದ್ವಿಚಕ್ರ ವಾಹನ, ಕಾರು ಹಾಗೂ ಆಟೊಗಳು ಸೇರಿವೆ. ಈ ವಾಹನ ಸವಾರರ ಮನೆಗೆ ತೆರಳಿ ದಂಡ ವಸೂಲಿ ಮಾಡುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಪ್ರತಿ ಸಂಚಾರ ಠಾಣೆಯ ವ್ಯಾಪ್ತಿಯಲ್ಲಿ ಎಎಸ್‌ಐ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ದಂಡ ಪಾವತಿಸಲು ಒಪ್ಪದವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

‘ಮನೆಗೆ ತೆರಳಿ ದಂಡ ವಸೂಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅನೇಕರು ನೋಟಿಸ್ ತಲುಪಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ದಾಖಲೆ ತೋರಿಸಿದ ಬಳಿಕ ತಪ್ಪೊಪ್ಪಿಕೊಳ್ಳುತ್ತಿದ್ದಾರೆ’ ಎಂದು ಸಂಚಾರ ವಿಭಾಗದ ಎಸಿಪಿ ಕೆ.ಎನ್‌.ಮಾದಯ್ಯ ತಿಳಿಸಿದರು.

* ಬ್ಲ್ಯಾಕ್‌ಬೆರ್ರಿ ಉಪಕರಣದಲ್ಲಿ ವಾಹನದ ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ನಿಯಮ ಉಲ್ಲಂಘನೆ ಮಾಹಿತಿ ಸಿಗುತ್ತದೆ. ದಂಡ ಪಾವತಿಸದ ವಾಹನವನ್ನು ವಶಕ್ಕೆ ಪಡೆಯುತ್ತೇವೆ

–ಕೆ.ಎನ್‌.ಮಾದಯ್ಯ

ಎಸಿಪಿ, ಸಂಚಾರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.