ADVERTISEMENT

ಮೈಸೂರು ವಲಯ ಮಟ್ಟದ ಹೂಡಿಕೆದಾರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಮೇ 2012, 19:30 IST
Last Updated 4 ಮೇ 2012, 19:30 IST

ಮೈಸೂರು: 2012ರ ವಿಶ್ವ ಬಂಡವಾಳ ಹೂಡಿಕೆದಾರರ ಪೂರ್ವಭಾವಿ ಸಭೆ ಅಂಗವಾಗಿ ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೈಸೂರು ವಲಯ ಮಟ್ಟದ ಹೂಡಿಕೆದಾರರ ಸಮಾವೇಶದಲ್ಲಿ 612 ಮಂದಿ ಉದ್ದಿಮೆದಾರರೊಂದಿಗೆ 10,725 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಹಾಗೂ ಮೈಸೂರಿನ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಆಶ್ರಯದಲ್ಲಿ ನಡೆದ ಸಮಾವೇಶದಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 612 ಉದ್ಯಮಿಗಳಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಒಡಂಬಡಿಕೆ ಪತ್ರ ವಿತರಿಸಿದರು.

ಮೈಸೂರು ಜಿಲ್ಲೆಗೆ ರೂ 9416 ಕೋಟಿ, ಮಂಡ್ಯ ರೂ  544.77 ಕೋಟಿ, ಹಾಸನ ರೂ  249.31 ಕೋಟಿ, ಕೊಡಗು ರೂ 3.4 ಕೋಟಿ, ಚಾಮರಾಜನಗರ ರೂ 320.81 ಕೋಟಿ ಹಾಗೂ ಚಾಮರಾಜನಗರ ಜಿಲ್ಲೆಗೆ ರೂ191.66 ಕೋಟಿ ಬಂಡವಾಳ ಹರಿದು ಬಂದಿದೆ.

ಪ್ರವಾಸೋದ್ಯಮ, ಆಹಾರ ಸಂಸ್ಕರಣೆ, ಎಂಜಿನಿಯರಿಂಗ್, ಆಟೋಮೊಬೈಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮಿನರಲ್ಸ್, ಫಾರ್ಮಾ ಮತ್ತು ಕೆಮಿಕಲ್ಸ್, ಹೌಸಿಂಗ್ ಮತ್ತು ಹೋಟೆಲ್, ಶಿಕ್ಷಣ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬಂದಿದ್ದು, ಇದರಿಂದ 51,301 ಉದ್ಯೋಗಾವಕಾಶ ಲಭ್ಯವಾಗಲಿವೆ.

ಪ್ರವಾಸೋದ್ಯಮಕ್ಕೆ ಒತ್ತು: `2012ರ `ಜಿಮ್~ನಿಂದ ರೂ 6 ಲಕ್ಷ ಕೋಟಿ  ಬಂಡವಾಳ ನಿರೀಕ್ಷಿಸಲಾಗಿದೆ. ಉತ್ಪಾದನೆ, ಕೃಷಿ, ಪ್ರವಾಸೋದ್ಯಮ ಕ್ಷೇತ್ರಗಳ ಬಲವರ್ಧನೆಗೆ ಒತ್ತು ನೀಡಲಾಗಿದೆ. ಯುವ ಉದ್ಯಮಿಗಳಿಗೆ ಪ್ರೋತ್ಸಾಹ, ನಿರುದ್ಯೋಗಿಗಳಿಗೆ ಕೆಲಸ ಈ ಸಮಾವೇಶದ ಉದ್ದೇಶವಾಗಿದೆ. ಭೂಮಿ ಸ್ವಾಧೀನ ಪಡಿಸಿಕೊಂಡ ರೈತ ಕುಟುಂಬಕ್ಕೆ ಉದ್ಯೋಗ ನೀಡಲಾಗುವುದು~ ಎಂದು ಮುಖ್ಯಮಂತ್ರಿ  ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.