ADVERTISEMENT

ರಾಷ್ಟ್ರೀಯ ಮಾದರಿಯಲ್ಲೇ ರಾಜ್ಯ ಯುವಜನೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST
ರಾಷ್ಟ್ರೀಯ ಮಾದರಿಯಲ್ಲೇ ರಾಜ್ಯ ಯುವಜನೋತ್ಸವ
ರಾಷ್ಟ್ರೀಯ ಮಾದರಿಯಲ್ಲೇ ರಾಜ್ಯ ಯುವಜನೋತ್ಸವ   

ಮಂಗಳೂರು: ನಗರದಲ್ಲಿ ಆಯೋಜಿಸಿದ 17ನೇ ರಾಷ್ಟ್ರೀಯ ಯುವಜನೋತ್ಸವದ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ರಾಜ್ಯ ಸರ್ಕಾರವು ಇದೇ ಮಾದರಿಯಲ್ಲಿಯೇ ರಾಜ್ಯ ಮಟ್ಟದ ಯುವಜನೋತ್ಸವವನ್ನು ಸಂಘಟಿಸಲು ಉತ್ಸಾಹ ತೋರಿದೆ.

`ಈ ಸಂಬಂಧ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ. ಸೋಮವಾರ ರಾಷ್ಟ್ರೀಯ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಈ ವಿಚಾರ ಘೋಷಿಸುವರು~ ಎಂದು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ಭಾನುವಾರ ತಿಳಿಸಿದರು.

`ರಾಷ್ಟ್ರೀಯ ಯುವಜನೋತ್ಸವ ಆಯೋಜನೆ ಮೂಲಕ ರಾಜ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುವ ಬಗ್ಗೆ ಹೊಸ ಹೊಳಹು ಸಿಕ್ಕಿದೆ. ಇದೇ ಮಾದರಿಯಲ್ಲಿ ರಾಜ್ಯ ಯುವಜನೋತ್ಸವ ಆಯೋಜಿಸಿ, ಪ್ರತಿ ಜಿಲ್ಲೆಯಿಂದ ನೂರಕ್ಕೂ ಅಧಿಕ ಕಲಾವಿದರ ತಂಡದ ಪ್ರದರ್ಶನ ಇರುವಂತೆ ವ್ಯವಸ್ಥೆ ಮಾಡಲಾಗುವುದು. ಆಗ ವೈವಿಧ್ಯತೆಗೂ ಅವಕಾಶ ದೊರಕುತ್ತದೆ. ಅತ್ಯುತ್ತಮ ತಂಡವನ್ನು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಲೂ ಅವಕಾಶವಾಗುತ್ತದೆ~ ಎಂದರು.

ಮುಂದಿನ ವರ್ಷ-ಪ್ರಸ್ತಾವನೆ: `ಇತ್ತೀಚಿನ ವರ್ಷಗಳಲ್ಲಿ ದೇಶದ ವಿವಿಧೆಡೆ ನಡೆದ ಯುವಜನೋತ್ಸವಗಳಿಗಿಂತ ಈಗಿನದು ಉತ್ತಮ ರೀತಿ ಸಂಘಟನಾತ್ಮಕವಾಗಿ ನಡೆದಿದೆ. ಮುಂದಿನ ವರ್ಷವೂ ನಗರದಲ್ಲಿ ಯುವಜನೋತ್ಸವ ನಡೆಸುವುದಾದರೆ ಅವಕಾಶ ನೀಡುತ್ತೇವೆ ಎಂದು ಕೇಂದ್ರ ಸರ್ಕಾರದ ಯುವಜನ ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ಉತ್ಸಾಹ ತೋರಿದರು.

ಸಿ.ಡಿ. ಬಿಡುಗಡೆ: `ರಾಷ್ಟ್ರೀಯ ಯುವಜನೋತ್ಸವದ ಪ್ರತಿಯೊಂದು ಕಾರ್ಯಕ್ರಮವನ್ನೂ ನೆಹರು ಯುವ ಕೇಂದ್ರ ಡಿಜಿಟಲ್ ಸ್ವರೂಪದಲ್ಲಿ ದಾಖಲಿಸಿಕೊಂಡಿದೆ. ಅದರ ಸಹಕಾರ ಪಡೆದು ಸಮಗ್ರ ಕಾರ್ಯಕ್ರಮದ ಸಿ.ಡಿ. ರೂಪಿಸಿ ಬಿಡುಗಡೆ ಮಾಡಲಾಗುವುದು. ಆಸಕ್ತರು ನಿರ್ದಿಷ್ಟ ಮೊತ್ತ ಪಾವತಿಸಿ ಖರೀದಿಸಬಹುದು.

ಈ ಯುವಜನೋತ್ಸವದ ನೆನಪು ಶಾಶ್ವತವಾಗಿ ಉಳಿಯುವಂತೆ ಮಾಡುವುದು, ಜತೆಗೆ ಉತ್ಸವದಲ್ಲಿ ಭಾಗವಹಿಸಲಾಗದ ಮಂದಿಗೂ ಸಾಂಸ್ಕೃತಿಕ ವೈವಿಧ್ಯದ ಸವಿ ಉಣಿಸುವ ಉದ್ದೇಶವೇ ಈ ಸಿ.ಡಿ. ಆಲೋಚನೆಗೆ ಕಾರಣ~ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.