ADVERTISEMENT

ರೈತರಿಗೆ ಸಬ್ಸಿಡಿ ಬೇಡ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 19:05 IST
Last Updated 2 ಫೆಬ್ರುವರಿ 2011, 19:05 IST

ಗದಗ: ರಾಜ್ಯದಲ್ಲಿ ಮೊದಲ ಬಾರಿಗೆ ಮಂಡಿಸುತ್ತಿರುವ ಕೃಷಿ ಬಜೆಟ್‌ನಲ್ಲಿ ರೈತರಿಗೆ ಸಬ್ಸಿಡಿ ಬೇಡ; ಕೃಷಿಗೆ ಅಗತ್ಯ ಮೂಲ ಸೌಲಭ್ಯ ಕೊಡಿ ಎಂದು ಆರ್ಟ್ ಆಫ್ ಲಿವಿಂಗ್‌ನ  ಶ್ರೀ ರವಿಶಂಕರ ಗುರೂಜಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕೃಷಿಗೆ ಅತ್ಯಗತ್ಯವಾದ ವಿದ್ಯುತ್ತನ್ನು ಸಮರ್ಪಕವಾಗಿ ನೀಡಬೇಕು. ರೈತರು ಬೆಳೆದ ಫಸಲು ಸಹಕಾರಿ ವಲಯದಲ್ಲಿ ಮಾರಾಟವಾಗಬೇಕು. ಇದರಲ್ಲಿ ಯಾವುದೇ ರೀತಿಯಲ್ಲೂ ಮಧ್ಯವರ್ತಿ ಹಾವಳಿ ಇರಬಾರದು. ಈ ರೀತಿಯ ಅಂಶಗಳನ್ನು ಕೃಷಿ ಬಜೆಟ್‌ನಲ್ಲಿ ಸೇರಿಸಬೇಕು ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈತರು ಮಿಶ್ರ ಬೆಳೆ, ಬಹು ಬೆಳೆ ಪದ್ಧತಿಯನ್ನು ಅನುಸರಿಸುವಂತೆ ಮಾಡಲು ಸೂಕ್ತ ರೀತಿಯ ಸೌಲಭ್ಯಗಳನ್ನು ನೀಡಬೇಕು. ರಾಸಾಯನಿಕಮುಕ್ತ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಲು ಅಗತ್ಯ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಬೇಕು ಎಂದು ಅವರು ಹೇಳಿದರು.

ಆದರ್ಶ ಗ್ರಾಮ: ಆರ್ಟ್ ಆಫ್ ಲಿವಿಂಗ್‌ನಿಂದ ಆಯ್ದ ಗ್ರಾಮಗಳನ್ನು ದತ್ತು ತಗೆದುಕೊಂಡು, ಅವುಗಳನ್ನು ‘ಆದರ್ಶ ಗ್ರಾಮ’ವನ್ನಾಗಿ ರೂಪಿಸುವ ಯೋಜನೆ ಶೀಘ್ರದಲ್ಲಿಯೇ ಕಾರ್ಯಗತಗೊಳ್ಳಲಿದೆ ಎಂದು ತಿಳಿಸಿದ ಗುರೂಜಿ, ಗದಗ ಜಿಲ್ಲೆಯಲ್ಲಿ ಸುಮಾರು 50 ಗ್ರಾಮಗಳನ್ನು ಗುರುತಿಸ ಲಾಗಿದೆ. ಪ್ರಥಮವಾಗಿ ಹರ್ತಿ ಗ್ರಾಮವನ್ನು ಆಯ್ಕೆಮಾಡಿಕೊಳ್ಳಲಾಗಿದೆ ಎಂದರು.

ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಮದ್ಯಪಾನ, ತಂಬಾಕು ನಿಷೇಧ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ ಗ್ರಾಮವನ್ನು ಸಂಪೂರ್ಣ ನೈರ್ಮಲೀಕರಣ ಗೊಳಿಸಲಾಗುತ್ತದೆ ಎಂದು ತಮ್ಮ ಯೋಜನೆ ಕುರಿತು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಸಂಗಮೇಶ ದುಂದೂರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.