ADVERTISEMENT

ಲಕ್ಷ ಮಂದಿ ಉದ್ಯೋಗಕ್ಕೆ ಕುತ್ತು

ಹೆದ್ದಾರಿ ಬದಿಯ 3,515 ಮದ್ಯದಂಗಡಿಗಳು ಬಂದ್

ವಿಜಯಕುಮಾರ್ ಸಿಗರನಹಳ್ಳಿ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಲಕ್ಷ ಮಂದಿ ಉದ್ಯೋಗಕ್ಕೆ ಕುತ್ತು
ಲಕ್ಷ ಮಂದಿ ಉದ್ಯೋಗಕ್ಕೆ ಕುತ್ತು   

ಬೆಂಗಳೂರು:  ಹೆದ್ದಾರಿ ಬದಿಯ  3,515 ಮದ್ಯದ ಅಂಗಡಿಗಳಿಗೆ ಬೀಗ ಬಿದ್ದಿರುವ ಪರಿಣಾಮ ರಾಜ್ಯದಲ್ಲಿ ಅಂದಾಜು 1 ಲಕ್ಷ ಮಂದಿ  ಉದ್ಯೋಗ  ಕಳೆದುಕೊಂಡಿದ್ದಾರೆ.

‘ನಗರ ಮತ್ತು ಪಟ್ಟಣಗಳಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳು ಡಿನೋಟಿಫೈ ಆಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ 50 ಸಾವಿರ ಮಂದಿ  ಉದ್ಯೋಗ ಕಳೆದುಕೊಳ್ಳುತ್ತಿದ್ದರು. ಆದರೆ, ಹೆದ್ದಾರಿ ಡಿನೋಟಿಫೈ ಆಗದ  ಕಾರಣ ಈ ಸಂಖ್ಯೆ ದುಪ್ಪಟ್ಟಾಗಿದೆ’  ಎಂದು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್‌. ಗುರುಸ್ವಾಮಿ ತಿಳಿಸಿದ್ದಾರೆ.

‘ಮದ್ಯದಂಗಡಿಗಳ ಮಾಲೀಕರಷ್ಟೇ ಅಲ್ಲದೆ, ಈ ಉದ್ಯಮದಲ್ಲೇ ನೇರವಾಗಿ ಬದುಕು ಕಟ್ಟಿಕೊಂಡಿದ್ದ  ಕ್ಯಾಷಿಯರ್‌, ಸಪ್ಲೇಯರ್, ಕ್ಲೀನರ್‌ ಸೇರಿ ಸುಮಾರು 50 ಸಾವಿರ ಜನರಿಗೂ  ಉದ್ಯೋಗ ಇಲ್ಲವಾಗಿದೆ’ ಎಂದು ಹೇಳಿದರು.

ADVERTISEMENT

‘ಅಲ್ಲದೇ, ಮದ್ಯದ ಅಂಗಡಿಗಳನ್ನು  ಆಶ್ರಯಿಸಿ ವಹಿವಾಟು ನಡೆಸುತ್ತಿದ್ದ  ಅಕ್ಕಪಕ್ಕದ ಹೋಟೆಲ್‌ಗಳು, ಬೀಡಾ ಅಂಗಡಿಗಳು,  ವಡೆ, ಬೋಂಡಾ, ಆಮ್ಲೇಟ್‌ ತಯಾರಿಸುವ ಗೂಡಂಗಡಿಗಳು ಬಂದ್‌ ಆಗಲಿವೆ.  ಹೀಗಾಗಿ ಪರೋಕ್ಷವಾಗಿ ಸುಮಾರು 50 ಸಾವಿರ ಮಂದಿಯ ಉದ್ಯೋಗಕ್ಕೂ ಕುತ್ತು ಬಂದಿದೆ’ ಎಂದು ಹೇಳಿದರು.

‘ಸೇಂದಿ ಇಳಿಸುವುದನ್ನು ನಿಲ್ಲಿಸಿದಾಗಲೂ  ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಸಾರಾಯಿ ಮಾರಾಟ ನಿಷೇಧಿಸಿದಾಗ ಕೂಡ ಅಷ್ಟೇ ಸಂಖ್ಯೆಯ ಜನರು ಬೀದಿಗೆ ಬಂದರು. ಎರಡೂ ಸಂದರ್ಭಗಳಲ್ಲಿ ಪರ್ಯಾಯ ಉದ್ಯೋಗ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಅನುಷ್ಠಾನಕ್ಕೆ ಬರಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಈಗಲೂ ಪರ್ಯಾಯ ಉದ್ಯೋಗ ಕಲ್ಪಿಸುವ ಭರವಸೆಯನ್ನು ಸರ್ಕಾರ ನೀಡಬಹುದು. ಆದರೆ, ಈಡೇರುವ  ವಿಶ್ವಾಸ ಇಲ್ಲ’ ಎಂದರು.

***

ಊರಿಗೆ ಹೊರಟಿದ್ದೇನೆ...
‘ಎಸ್‌ಎಸ್‌್ಎಲ್‌ಸಿ ಫೇಲಾದ ಕೂಡಲೇ  ಉದ್ಯೋಗ ಹುಡುಕಿಕೊಂಡು ಬಂದಾಗ ನೆಲಮಂಗಲ ಬಳಿಯ  ಬಾರ್‌ನಲ್ಲಿ ಕೆಲಸ ಸಿಕ್ಕಿತು. 12 ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದೇನೆ.  ಆದರೀಗ ನಮ್ಮ ಬಾರ್‌ ಬಾಗಿಲು ಮುಚ್ಚಿದ್ದು, ಊರಿನ ಕಡೆ ಹೊರಟಿದ್ದೀನಿ’ ಎಂದು ತುಮಕೂರು ಜಿಲ್ಲೆ

ಕುಣಿಗಲ್‌ನ ಚೇತನ್‌ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು. ‘ಮೊದಮೊದಲು ತಟ್ಟೆ, ಲೋಟ ತೊಳೆಯುತ್ತಿದ್ದೆ. ಈಗ ಸಪ್ಲೈಯರ್‌ ಆಗಿದ್ದೇನೆ. ನಾನೇ ದುಡಿದು ಅಕ್ಕನ ಮದುವೆ ಮಾಡಿದ್ದೆ. ಮುಂದಿನ ವರ್ಷ ನನ್ನ ಮದುವೆಗೆ ಹಣ ಜೋಡಿಸುತ್ತಿದ್ದೆ’ ಎಂದರು.

‘ನಾನೊಬ್ಬನೇ ಅಲ್ಲ ನಮ್ಮಲ್ಲಿ ಕೆಲಸ ಮಾಡುತ್ತಿದ್ದ 20 ಮಂದಿಯ ಸ್ಥಿತಿಯೂ ಹೆಚ್ಚು ಕಡಿಮೆ ಹೀಗೇ ಇದೆ.  ಬೇರೆ ಉದ್ಯೋಗ ಗೊತ್ತಿಲ್ಲ. ಮುಂದೇನು ಮಾಡಬೇಕು ತೋಚುತ್ತಿಲ್ಲ. ಬಾರ್‌ ಮಾಲೀಕರು ಸ್ಪಲ್ಪದಿನ ಬಿಟ್ಟು ಬರಲು ಹೇಳಿದ್ದಾರೆ. ಅದೇ ಭರವಸೆಯಲ್ಲಿ ಹೋಗುತ್ತಿದ್ದೇನೆ’ ಎಂದು ಚೇತನ್ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.