ADVERTISEMENT

ವಕೀಲನನ್ನೇ ಎಳೆದೊಯ್ದ ವಕೀಲರ ಗುಂಪು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬಂದಿದ್ದ ವಕೀಲ ಸಂದೀಪ್ ಪಾಟೀಲ್ ಅವರನ್ನು ನ್ಯಾಯಾಲಯದಿಂದ ಹೊರಕ್ಕೆ ಎಳೆದೊಯ್ದ ವಕೀಲರು, ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ನಗರ ಸಿವಿಲ್ ನ್ಯಾಯಾಲಯದಲ್ಲಿ ನಡೆದಿದೆ.

ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡು ಮತ್ತು ಮೂರನೇ ಖಾಸಗಿ ದೂರುಗಳ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್. ಎನ್.ಸೋಹನ್‌ಕುಮಾರ್ ಮತ್ತು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಸೋಮವಾರ ವಾರೆಂಟ್ ಹೊರಡಿಸಿತ್ತು. ವಾರೆಂಟ್ ಸಂಬಂಧ ಜಾಮೀನು ಅರ್ಜಿ ಸಲ್ಲಿಸಲು ಬಂದ ವೇಳೆ ಈ ಘಟನೆ ನಡೆದಿದೆ.

ಬೆಳಿಗ್ಗೆ 10.50ಕ್ಕೆ ಯಡಿಯೂರಪ್ಪ ಮತ್ತು ಇತರರು ನ್ಯಾಯಾಲಯಕ್ಕೆ ಬಂದರು. ಅವರೊಂದಿಗೆ ಸಂದೀಪ್ ಇದ್ದರು. ಜಾಮೀನು ನೀಡುವಂತೆ ಕೋರಿ ಪ್ರಮಾಣಪತ್ರ ಸಲ್ಲಿಸುವ ಸಂಬಂಧ ಯಡಿಯೂರಪ್ಪ ಅವರಿಗೆ ಸಲಹೆ ನೀಡುತ್ತಿದ್ದರು. 10.55ರ ವೇಳೆ ನ್ಯಾಯಾಲಯದ ಒಳಕ್ಕೆ ನುಗ್ಗಿದ ವಕೀಲರ ಗುಂಪೊಂದು ಸಂದೀಪ್ ಅವರನ್ನು ಬಲವಂತವಾಗಿ ಹೊರಗೆ ಎಳೆದೊಯ್ದಿತು. ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿರುವ ನಡುವೆಯೇ ಕೋರ್ಟ್‌ಗೆ ಹಾಜರಾಗಿರುವ ಬಗ್ಗೆ ಅವರನ್ನು ಟೀಕಿಸಿದ ವಕೀಲರ ಗುಂಪು, ಹಲ್ಲೆಗೂ ಯತ್ನಿಸಿತು ಎಂದು ಮೂಲಗಳು ತಿಳಿಸಿವೆ.

11 ಗಂಟೆಗೆ ನ್ಯಾಯಾಧೀಶ ಎನ್. ಕೆ.ಸುಧೀಂದ್ರ ರಾವ್ ಅವರು ಕಲಾಪ ಆರಂಭಿಸಿದರು. ಆಗ, ಸಂದೀಪ್ ಅವರನ್ನು ವಕೀಲರು ಎಳೆದೊಯ್ದ ಘಟನೆ ಕೇಳಿದ ನ್ಯಾಯಾಧೀಶರು, ತೀವ್ರ ಅಸಮಾಧಾನ ಹೊರಹಾಕಿದರು. ಕೆಲ ನಿಮಿಷಗಳಲ್ಲೇ ನ್ಯಾಯಾಲಯದೊಳಕ್ಕೆ ಗುಂಪಾಗಿ ಬಂದ ಕೆಲ ವಕೀಲರು, ಕಲಾಪ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಗದ್ದಲ ಆರಂಭಿಸಿದರು. ಆಗ, ಕೋಪಗೊಂಡ ರಾವ್, `ಗದ್ದಲ ಮಾಡಿದರೆ ಬಂಧನಕ್ಕೆ ಒಪ್ಪಿಸುತ್ತೇನೆ. ಯಾರು ಗದ್ದಲ ಮಾಡುತ್ತಾರೆ ಎಂಬುದನ್ನು ಪತ್ತೆಹಚ್ಚಿ~ ಎಂದು ಹಾಜರಿದ್ದ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದರು.

ನ್ಯಾಯಾಧೀಶರು ಗರಂ ಆಗುತ್ತಿದ್ದಂತೆ ವರಸೆ ಬದಲಿಸಿದ ವಕೀಲರ ಗುಂಪು, ಕಲಾಪ ನಿಲ್ಲಿಸುವಂತೆ ಮನವಿ ಮಾಡಲು ಬಂದಿರುವುದಾಗಿ ಹೇಳಿತು. ಕಲಾಪಕ್ಕೆ ಅಡ್ಡಿಪಡಿಸಿದರೆ ಬಂಧನ ಖಚಿತ ಎಂದು ನ್ಯಾಯಾಧೀಶರು ಪರೋಕ್ಷವಾಗಿ ಸೂಚಿಸಿದಾಗ ಹೊರಹೋದರು. ಮೊಗಸಾಲೆಯಲ್ಲಿ ಗದ್ದಲ ಮುಂದುವರಿದಾಗ ಮತ್ತೆ ನ್ಯಾಯಾಧೀಶರು ಸಿಟ್ಟಾದರು. ಆಗ, ಅವರೆಲ್ಲ ಅಲ್ಲಿಂದ ದೂರ ಹೋದರು.

ಭದ್ರತೆ ಕಿರಿಕಿರಿ: ಇಷ್ಟೆಲ್ಲ ಆದ ಬಳಿಕ ಯಡಿಯೂರಪ್ಪ ಮತ್ತು ಇತರೆ ಆರೋಪಿಗಳು ನೇರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಜಾಮೀನು ನೀಡುವಂತೆ ಕೋರಿದರು. ಅನಿವಾರ್ಯ ಕಾರಣಗಳಿಂದ ವಿಚಾರಣೆಗೆ ಗೈರು ಹಾಜರಾಗಿದ್ದು, ಮತ್ತೆ ಎಂದೂ ಹೀಗೆ ಮಾಡುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದರು. ಅದನ್ನು ಮಾನ್ಯಮಾಡಿದ ನ್ಯಾಯಾಧೀಶರು, ಸೋಮವಾರ ಹೊರಡಿಸಿದ್ದ ವಾರೆಂಟ್ ಅನ್ನು ರದ್ದು ಮಾಡಿದರು.

ಈ ವೇಳೆಗೆ, ಯಡಿಯೂರಪ್ಪ ಅವರು ಭದ್ರತಾ ಸಿಬ್ಬಂದಿಯನ್ನು ಮನೆಯಲ್ಲೇ ಬಿಟ್ಟು ಬಂದಿದ್ದಾರೆ ಎಂಬುದು ನ್ಯಾಯಾಧೀಶರಿಗೆ ತಿಳಿಯಿತು. ಅವರಿಗೆ ಭದ್ರತೆ ನೀಡಲು ಪೊಲೀಸರು ಆಗಮಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಯಡಿಯೂರಪ್ಪ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲು ಖುದ್ದಾಗಿ ಸ್ಥಳಕ್ಕೆ ಬರುವಂತೆ ನಗರ ಪೊಲೀಸ್ ಕಮಿಷನರ್ ಕೆ.ಜ್ಯೋತಿ ಪ್ರಕಾಶ್ ಮಿರ್ಜಿ ಅವರಿಗೆ ಸಂದೇಶ ರವಾನಿಸಲು ಸೂಚಿಸಿದರು.

ಆದರೆ, ನ್ಯಾಯಾಲಯದ ತಳಮಹಡಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿದ್ದು, ಯಡಿಯೂರಪ್ಪ ಅವರನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಾರೆ ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ನಂತರ ಯಡಿಯೂರಪ್ಪ ಮತ್ತು ಇತರರು ನ್ಯಾಯಾಲಯದಿಂದ ನಿರ್ಗಮಿಸಿದರು.

ಅವರು ಹೊರಹೋಗುತ್ತಿದ್ದ ವೇಳೆ ವಕೀಲರ ಗುಂಪೊಂದು ಯಡಿಯೂರಪ್ಪ ಅವರನ್ನು ತೀವ್ರವಾಗಿ ನಿಂದಿಸಿ, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್ ಬಂಧನದ ಹಿಂದೆ  `ಬಿಎಸ್‌ವೈ~ ಕೈವಾಡವಿದೆ ಎಂಬರ್ಥದಲ್ಲಿ ವಾಗ್ದಾಳಿ ನಡೆಸಿತು ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.