ADVERTISEMENT

ವರದಿ ಸಲ್ಲಿಸದ ಮಂತ್ರಿ ಟೆಕ್‌ಜೋನ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 19:41 IST
Last Updated 14 ಮಾರ್ಚ್ 2018, 19:41 IST

ನವದೆಹಲಿ: ಬೆಳ್ಳಂದೂರು ಕೆರೆಯ ಬಫರ್ ವಲಯದ ನಿಯಮ ಉಲ್ಲಂಘಿಸಿಲ್ಲ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಅನುಸರಣಾ ವರದಿ ಸಲ್ಲಿಸಲು ವಿಳಂಬ ನೀತಿ ಅನುಸರಿಸಿದ ಕಾರಣ ಮಂತ್ರಿ ಟೆಕ್‌ಜೋನ್ ಸಂಸ್ಥೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ₹ 5 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಬಫರ್‌ ವಲಯದ ಉಲ್ಲಂಘನೆ ಮಾಡುವಂತಿಲ್ಲ ಎಂಬ ಎನ್‌ಜಿಟಿಯ ಈ ಹಿಂದಿನ ಆದೇಶವನ್ನು ಪಾಲಿಸಿಲ್ಲ ಎಂದು ದೂರಿದ್ದರಿಂದ, ಸಮರ್ಪಕ ಕಾರಣ ನೀಡಿ ಅನುಸರಣಾ ವರದಿ ಸಲ್ಲಿಸುವಂತೆ ಸೂಚಿಸಿರುವುದನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿ ಡಾ. ಜವಾದ್‌ ರಹೀಂ ನೇತೃತ್ವದ ಪೀಠ ದಂಡ ವಿಧಿಸಿ ಆದೇಶಿಸಿತು‌. ಅಲ್ಲದೆ ಇದೇ 20ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿತು.

ಮುಂದಿನ ವಿಚಾರಣೆ ವೇಳೆ ಮಂತ್ರಿ ಟೆಕ್‌ ಜೋನ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಜರಿರುವಂತೆ ಸೂಚಿಸಿದ ನ್ಯಾಯಪೀಠ, ಈ ಹಿಂದಿನ ಆದೇಶ ಪಾಲಿಸಿರುವುದು ಕಂಡುಬಂದಲ್ಲಿ ದಂಡದ ಮೊತ್ತದಲ್ಲಿ ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿತು.

ADVERTISEMENT

ಬೆಳ್ಳಂದೂರು ಮತ್ತು ಅಗರ ಕೆರೆಗಳ ಬಫರ್ ವಲಯದಲ್ಲಿ, ಅತಿಕ್ರಮ ಮಾಡಿರುವ ಜಮೀನನ್ನು ಸರ್ಕಾರಕ್ಕೆ ಮರಳಿಸಬೇಕಲ್ಲದೆ, ಕೆರೆಯ ಪುನಶ್ಚೇತನಕ್ಕೆ ನೆರವಾಗಬೇಕು ಎಂಬ ಷರತ್ತುಗಳಿರುವ ಆದೇಶದ ಪಾಲನೆ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಪೀಠವು, ಈ ಕುರಿತು ಸಮಿತಿಯೊಂದನ್ನು ರಚಿಸಿ ವರದಿ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.