ADVERTISEMENT

ವರ್ಷಪೂರ್ತಿ ಜೋಗ ವೈಭವ

ರಾಜ್ಯ ಸಚಿವ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 19:30 IST
Last Updated 17 ಆಗಸ್ಟ್ 2016, 19:30 IST
ವರ್ಷಪೂರ್ತಿ ಜೋಗ ವೈಭವ
ವರ್ಷಪೂರ್ತಿ ಜೋಗ ವೈಭವ   

ಬೆಂಗಳೂರು:  ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ವೈಭವವನ್ನು ವರ್ಷಪೂರ್ತಿ ಕಣ್ತುಂಬಿಕೊಳ್ಳುವ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

‘ಕರ್ನಾಟಕದ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್‌. ಶೆಟ್ಟಿ ಅವರು ಪ್ರತಿಫಲದ ನಿರೀಕ್ಷೆಯಿಲ್ಲದೇ ₹450 ಕೋಟಿ ಮೊತ್ತದಲ್ಲಿ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿದ್ದಾರೆ. ಸರ್ಕಾರಕ್ಕೆ ಯಾವುದೇ ಹೊರಬೀಳದೇ ಇರುವುದರಿಂದ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ’ ಎಂದು ಸಚಿವ ಜಯಚಂದ್ರ ತಿಳಿಸಿದರು.

ಸರ್ಕಾರಕ್ಕೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಗೆ ಕುಂದುಂಟಾಗದಂತೆ  ಜೋಗ ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ಯೋಜನೆ ಅನುಷ್ಠಾನ ಮಾಡಬೇಕು. ವಾಣಿಜ್ಯ ಉದ್ದೇಶದ ಚಟುವಟಿಕೆಗೆ ಅವಕಾಶ ಇರಕೂಡದು ಎಂಬ ಷರತ್ತು ವಿಧಿಸಲಾಗಿದೆ ಎಂದು ಹೇಳಿದರು.

ಐಟಿಐನ(ಕೈಗಾರಿಕಾ ತರಬೇತಿ ಸಂಸ್ಥೆ) ಶಿಕ್ಷಕರಿಗೆ ತರಬೇತಿ ನೀಡಲು ಬಳ್ಳಾರಿಯಲ್ಲಿ ಉನ್ನತ ತರಬೇತಿ ಸಂಸ್ಥೆಯನ್ನು ಕೇಂದ್ರ ಸರ್ಕಾರ ಆರಂಭಿಸಲಿದ್ದು, ಇದಕ್ಕಾಗಿ 5 ಎಕರೆ ಭೂಮಿ ನೀಡಲುತೀರ್ಮಾನಿಸಲಾಗಿದೆ.

ಐಟಿಐ ಶಿಕ್ಷಕರು ತರಬೇತಿ ಪಡೆಯಲು ಹೈದರಾಬಾದ್‌, ಲೂಧಿಯಾನ, ಕೊಲ್ಕತ್ತಾ, ಡೆಹ್ರಾಡೂನ್‌ಗೆ ಹೋಗಬೇಕಾಗಿದೆ. ಅದನ್ನು ತಪ್ಪಿಸಲು ಈ ಸಂಸ್ಥೆ ಸ್ಥಾಪಿಸಲಾಗುತ್ತಿದೆ ಎಂದು ವಿವರಿಸಿದರು.

‌ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಅನುಷ್ಠಾನ ಮಾಡಲಿರುವ ₹ 200 ಕೋಟಿ ಮೊತ್ತದ ರಸ್ತೆ ಸುರಕ್ಷತೆ  ಯೋಜನೆಗೆ  ಅನುಮೋದನೆ ನೀಡಲಾಗಿದೆ.

ರಸ್ತೆ ಇಕ್ಕೆಲಗಳ ಗ್ರಾಮವಾಸಿಗಳು ರಸ್ತೆ ದಾಟಲು ಸೂಚನಾ ಫಲಕ, ಪಾದ ಚಾರಿ ಮಾರ್ಗ ಮತ್ತಿತರ ಕಾಮಗಾರಿ ಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಕೈಗೆತ್ತಿಕೊಳ್ಳಲಿದೆ. ಸರ್ಕಾರ ಈ ವರ್ಷ ₹ 50 ಕೋಟಿ  ಬಿಡುಗಡೆ ಮಾಡಲಿದೆ ಎಂದು ಜಯಚಂದ್ರ ವಿವರಿಸಿದರು.
ಪ್ರಮುಖ ನಿರ್ಣಯಗಳು

*ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಇ–ಆಸ್ಪತ್ರೆ’ ಕಾರ್ಯಕ್ರಮಕ್ಕೆ ₹ 24.70 ಕೋಟಿ ಮೊತ್ತದಲ್ಲಿ  ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ಖರೀದಿಸಲು ಆಡಳಿತಾತ್ಮಕ ಅನುಮೋದನೆ.

*ನವದೆಹಲಿ ಕರ್ನಾಟಕ ಭವನ ಹೊರತುಪಡಿಸಿ ಕರ್ನಾಟಕ ಆತಿಥ್ಯ ಸಂಸ್ಥೆಯಲ್ಲಿ  ಸೂಪರಿಂಟೆಂಡೆಂಟ್‌ ಹಾಗೂ ಲೆಕ್ಕಾಧಿಕಾರಿ ಹುದ್ದೆ ಸೃಷ್ಟಿಸಲು ಒಪ್ಪಿಗೆ.

*ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಧಾರವಾಡ ಕಚೇರಿಯಲ್ಲಿ  ಭೂಸ್ವಾಧೀನಾಧಿಕಾರಿಯಾಗಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಮಹಾಂತೇಶ ಬೀಳಗಿ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಲು ಅನುಮತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.