ADVERTISEMENT

ವಿದ್ಯಾರ್ಥಿನಿಯರ ಪ್ರತಿಭಟನೆ

ಮೈಸೂರು: ಹಾಸ್ಟೆಲ್‌ಗೆ ನುಗ್ಗಿ ಯುವಕನ ಅಸಭ್ಯ ವರ್ತನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ಮೈಸೂರು: ಮಹಾರಾಣಿ ಮಹಿಳಾ ವಿದ್ಯಾರ್ಥಿ­ನಿಲಯಕ್ಕೆ ಮಧ್ಯರಾತ್ರಿ ಅತಿ­ಕ್ರಮ­ವಾಗಿ ಪ್ರವೇಶಿಸಿದ ಯುವಕನೊಬ್ಬ ಅಸಭ್ಯ­ವಾಗಿ ವರ್ತಿಸಿದ್ದರಿಂದ ಆಕ್ರೋಶ­ಗೊಂಡ ನೂರಾರು ವಿದ್ಯಾರ್ಥಿನಿಯರು ನಗರದ ಮೆಟ್ರೊಪೋಲ್‌ ವೃತ್ತದಲ್ಲಿ ಮಂಗಳ­ವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ಮೆಟ್ರೊಪೋಲ್ ವೃತ್ತದ ಬಳಿ ಇರುವ ಮಹಾರಾಣಿ ವಿಜ್ಞಾನ ಕಾಲೇಜಿಗೆ ಸೇರಿದ ಮಹಿಳಾ ವಿದ್ಯಾರ್ಥಿ­ನಿಲಯಕ್ಕೆ ಮಂಗಳವಾರ ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ   ಅಪರಿ­ಚಿತ ಯುವಕ ನುಗ್ಗಿದ. ಇದನ್ನು ಗಮನಿ­ಸಿದ ವಿದ್ಯಾರ್ಥಿನಿಯರು ಗಾಬರಿ­ಗೊಂಡು ಚೀರಾಡಿದರು. ಇದೇ ವೇಳೆ ವಿದ್ಯಾರ್ಥಿ­ನಿಯರ ಮುಂದೆ ಕೂಗಾಡಿದ ಯುವಕ ಅಸಭ್ಯವಾಗಿ ವರ್ತಿಸಿ, ಸ್ಥಳ­ದಿಂದ ಕಾಲ್ಕಿತ್ತಿದ್ದಾನೆ. ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದರೂ  ವಿದ್ಯಾರ್ಥಿನಿ­ಯರು­ ಸಹಾಯಕ್ಕಾಗಿ ಕೂಗಿ­ಕೊಂಡರೂ ಆತ ಬಂದಿಲ್ಲ.

ಇದರಿಂದ ವಿದ್ಯಾರ್ಥಿನಿಯರು ಇನ್ನಷ್ಟು ಆತಂಕ­ಗೊಂಡು ಕೊಠಡಿ ಬಿಟ್ಟು ಹೊರಬರಲಿಲ್ಲ. ಅಪರಿಚಿತ ಹಾಸ್ಟೆಲ್‌ಗೆ ನುಗ್ಗಿರುವ ದೃಶ್ಯಾವಳಿ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿ­ನಿಯರು ಬೆಳಿಗ್ಗೆ ಹಾಸ್ಟೆಲ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಅಪರಿಚಿತ ಯುವಕ ಹಾಸ್ಟೆಲ್‌ಗೆ ನುಗ್ಗಿದ ಕೂಡಲೇ ಹಾಸ್ಟೆಲ್‌ನ ಡೀನ್‌ ನಾಗರತ್ನಾ ಮತ್ತು ಪ್ರಾಂಶುಪಾಲರಾದ ಡಾ.ಸುಶೀಲಾ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಲಾಯಿತು.

ಆದರೂ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿ, ಇಬ್ಬರ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕ ವಾಸು, ಪ್ರತಿಭಟನಾನಿರತ ವಿದ್ಯಾರ್ಥಿನಿ­ಯರ ಸಮಸ್ಯೆ ಆಲಿಸಿದರು. ವಾರದೊಳಗೆ ಸಮಸ್ಯೆ ಬಗೆಹರಿಸು­ವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿನಿಯರು ಪ್ರತಿಭಟನೆ ಕೈಬಿಟ್ಟರು.

ಸಂಚಾರ ಅಸ್ತವ್ಯಸ್ತ: ವಿದ್ಯಾರ್ಥಿನಿಯರು ಮೆಟ್ರೊಪೋಲ್‌ ವೃತ್ತದಲ್ಲಿ ದಿಢೀರ್‌ ಪ್ರತಿಭಟನೆ ಮಾಡಿದ್ದರಿಂದ ಮೈಸೂರು–­ಹುಣ­ಸೂರು ಮತ್ತು ಜೆಎಲ್‌ಬಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.