ADVERTISEMENT

ವಿಶ್ವನಾಥನ್‌ಗೆ ಷರತ್ತಿನ ಜಾಮೀನು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಿವೃತ್ತ ಐಎಎಸ್‌ ಅಧಿಕಾರಿ ಎನ್‌. ವಿಶ್ವನಾಥನ್‌ ಅವರಿಗೆ ಹೈಕೋರ್ಟ್‌ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುಮಾರಸ್ವಾಮಿ ಮತ್ತು ಸುಬ್ಬರಾಯನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಗುತ್ತಿಗೆ ಪ್ರದೇಶದಲ್ಲಿ ₨ 1,232 ಕೋಟಿ ಮೌಲ್ಯದ ಅದಿರು ಲೂಟಿ ಮಾಡಲು ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ಕಂಪೆನಿಗೆ ಸಹಕರಿಸಿದ ಆರೋಪ ವಿಶ್ವನಾಥನ್‌ ಮೇಲಿದೆ.

ವಿಶ್ವನಾಥನ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌. ಆನಂದ ನಡೆಸಿದ್ದರು. ಆದೇಶವನ್ನು ಕಾಯ್ದಿರಿಸಲಾಗಿತ್ತು. ‘ವಿಶ್ವನಾಥನ್‌ ಅವರು ₨ 1 ಲಕ್ಷ ಮೌಲ್ಯದ ಬಾಂಡ್‌ ನೀಡಬೇಕು. ಇಬ್ಬರ ವೈಯಕ್ತಿಕ ಭದ್ರತೆ ನೀಡಬೇಕು. ಸಾಕ್ಷಿಗಳ ನಾಶಕ್ಕೆ ಯತ್ನಿಸಬಾರದು’ ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.

ಸಿಬಿಐ ಅನುಮತಿಯಿಲ್ಲದೆ ಬೇರೆಡೆ ತೆರಳುವಂತಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಈ ಷರತ್ತುಗಳಲ್ಲಿ ಯಾವುದನ್ನೇ ಉಲ್ಲಂಘಿಸಿದರೂ, ನ್ಯಾಯಾಲಯದ ಮೊರೆ ಹೋಗಲು ಸಿಬಿಐ ಸ್ವತಂತ್ರವಾಗಿದೆ ಎಂದು ನ್ಯಾಯಮೂರ್ತಿಯವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಪೊಲೀಸ್‌ ಇನ್‌ಸ್ಪೆಕ್ಟರ್‌ ರಮಾಕಾಂತ ಹುಲ್ಲೂರು ಅವರಿಗೂ ಜಾಮೀನು ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT