ADVERTISEMENT

ಸಕಾಲಕ್ಕೆ ಉತ್ತಮ ಪ್ರತಿಕ್ರಿಯೆ: ನೋಡಲ್ ಅಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST
ಸಕಾಲಕ್ಕೆ ಉತ್ತಮ ಪ್ರತಿಕ್ರಿಯೆ: ನೋಡಲ್ ಅಧಿಕಾರಿಗಳ ನೇಮಕ
ಸಕಾಲಕ್ಕೆ ಉತ್ತಮ ಪ್ರತಿಕ್ರಿಯೆ: ನೋಡಲ್ ಅಧಿಕಾರಿಗಳ ನೇಮಕ   

ಬೆಂಗಳೂರು: ಸಾರ್ವಜನಿಕರಿಗೆ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ `ಸಕಾಲ~ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯ ಉಸ್ತುವಾರಿಗಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಇಲಾಖೆವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.

ಸಕಾಲ ಯೋಜನೆಯ ಅನುಷ್ಠಾನದ ಬಗ್ಗೆ ಸೋಮವಾರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಶೇ 98.44ರಷ್ಟು ಅರ್ಜಿಗಳು ಕಾಲಮಿತಿಯಲ್ಲಿ ಇತ್ಯರ್ಥವಾಗಿವೆ. ತಿಂಗಳಾಂತ್ಯಕ್ಕೆ ಶೇ 99ರಷ್ಟು ಗುರಿ ಸಾಧಿಸುವ ಉದ್ದೇಶವಿದೆ ಎಂದರು.

ಏಪ್ರಿಲ್ 2ರಿಂದ 22ರವರೆಗೆ ಒಟ್ಟು 6,66,645 ಅರ್ಜಿಗಳು ಬಂದಿವೆ. ಶೇ 1.56ರಷ್ಟು ಅರ್ಜಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಅರ್ಜಿಗಳು ಕಾಲಮಿತಿಯಲ್ಲಿ ವಿಲೇವಾರಿ ಆಗಿವೆ ಎಂದು ಅವರು ಹೇಳಿದರು.

ADVERTISEMENT

ಕಂದಾಯ ಇಲಾಖೆಯಲ್ಲಿ 2,47,500 ಅರ್ಜಿಗಳು ಬಂದಿದ್ದು, 1,50,916 ಅರ್ಜಿಗಳು ಇತ್ಯರ್ಥವಾಗಿವೆ. ಅದೇ ರೀತಿ ವಾಣಿಜ್ಯ ಇಲಾಖೆಯಲ್ಲಿ 1,85,883 ಅರ್ಜಿಗಳು ಬಂದಿದ್ದು, 1,69,546 ಇತ್ಯರ್ಥವಾಗಿವೆ ಎಂದು ತಿಳಿಸಿದರು.

ಸಕಾಲ ಮಿಷನ್ ವತಿಯಿಂದ ಪ್ರತಿದಿನ ಒಂದೊಂದು ಜಿಲ್ಲೆಯಲ್ಲಿ ನಾಲ್ಕು ಜನರನ್ನು ಸಂಪರ್ಕಿಸಿ `ಸಕಾಲ~ ಯೋಜನೆಯ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ. ವಿವಿಧ ಇಲಾಖೆಗಳ ಕಾರ್ಯವೈಖರಿ, ಅರ್ಜಿಗಳ ವಿಲೇವಾರಿ, ಸಾರ್ವಜನಿಕರಿಂದ ಬಂದಿರುವ ಸಲಹೆಗಳ ಕುರಿತ ಸಲಹಾ ರೂಪದ ಕೈಪಿಡಿಯನ್ನು ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಎಲ್ಲ ಪೊಲೀಸ್ ಠಾಣೆಗಳ ಮುಂದೆ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಮಾಹಿತಿ ಫಲಕವನ್ನು ಅಳವಡಿಸುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯವಿರುವ ಕಡೆ ಕಂಪ್ಯೂಟರ್, ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

151 ಸೇವೆಗಳ ಪೈಕಿ 21 ಸೇವೆಗಳಿಗೆ ಸಂಬಂಧಪಟ್ಟಂತೆ ಯಾವುದೇ ಅರ್ಜಿಗಳು ಬಂದಿಲ್ಲ. ಪಿಯುಸಿ ಫಲಿತಾಂಶ ಇನ್ನೂ ಬಂದಿಲ್ಲದ ಕಾರಣ ಮರುಎಣಿಕೆ, ಮರು ಮೌಲ್ಯಮಾಪನ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಅರ್ಜಿಗಳು ಬಂದಿಲ್ಲ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 0.89, ಚಿತ್ರದುರ್ಗದಲ್ಲಿ ಶೇ 0.81, ವಿಜಾಪುರದಲ್ಲಿ ಶೇ 0.8, ಕೊಪ್ಪಳದಲ್ಲಿ ಶೇ 3.05, ರಾಯಚೂರಿನಲ್ಲಿ ಶೇ 2.82 ಹಾಗೂ ತುಮಕೂರಿನಲ್ಲಿ ಶೇ 2.93ರಷ್ಟು ಅರ್ಜಿಗಳು ವಿಲೇವಾರಿ ಆಗಬೇಕಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.