ADVERTISEMENT

ಸದಸ್ಯತ್ವ ರದ್ದು: ಹೈಕೋರ್ಟ್‌ಗೆ ಮೊರೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರಾಗಿದ್ದವರ ನಾಮನಿರ್ದೇಶನ ಹಿಂಪಡೆದ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ವಜಾಗೊಂಡಿರುವ ಒಟ್ಟು ಏಳು ಜನ ಸಿಂಡಿಕೇಟ್ ಸದಸ್ಯರು, ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ವಿ.ವಿ.ಯ ಸಿಂಡಿಕೇಟ್ ಸದಸ್ಯರಾಗಿದ್ದ ಅ.ಮ. ಭಾಸ್ಕರ, ಜಗದೀಶ್, ಹೀರೇಂದ್ರ ಶಹಾ ಮತ್ತು ದಾಸಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ, ಸರ್ಕಾರಕ್ಕೆ ನೋಟಿಸ್ ನೀಡಲು ಆದೇಶಿಸಿದ್ದಾರೆ.

`ನಾಮನಿರ್ದೇಶನ ಹಿಂಪಡೆಯಲು ಸರ್ಕಾರ ಸರಿಯಾದ ಕಾರಣಗಳನ್ನು ನೀಡಬೇಕು. ಆದರೆ ನಮ್ಮ ವಿಚಾರದಲ್ಲಿ ಸರ್ಕಾರ ಸರಿಯಾದ ಕಾರಣ ನೀಡಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಸರ್ಕಾರ ಇಂಥ ಕ್ರಮಕ್ಕೆ ಮುಂದಾಗಿದೆ. ಶಿಕ್ಷ ಣ ತಜ್ಞರು ಎಂಬ ಕಾರಣಕ್ಕೆ ನಮ್ಮನ್ನು ಸಿಂಡಿಕೇಟ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ಸ್ವಾಯತ್ತ ಸಂಸ್ಥೆಯಾದ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತಲೆತೂರಿಸಿದೆ' ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಇದೇ ರೀತಿ, ಬೆಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯರಾಗಿದ್ದ ಡಾ.ಕೆ.ವಿ. ಆಚಾರ್ಯ, ಟಿ.ಎಚ್. ಶ್ರೀನಿವಾಸಯ್ಯ ಮತ್ತು ಸಿ.ಕೆ. ಜಗದೀಶ ಪ್ರಸಾದ್ ಅವರೂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹಿಂಚಿಗೇರಿ ಅವರು ಸರ್ಕಾರಕ್ಕೆ ನೋಟಿಸ್ ಜಾರಿಗೆ ಶುಕ್ರವಾರ ಆದೇಶಿಸಿದ್ದಾರೆ. ಈ ಅರ್ಜಿ ವಿಚಾರಣೆ ಸಹ ಸೋಮಾರ ನಡೆಯಲಿದೆ.

ನೇಮಕ ರದ್ದು: ಪ್ರೊ. ಬಿಕೆಸಿ ಸಮರ್ಥನೆ
ಬೆಂಗಳೂರು: ಹಿಂದಿನ ಸರ್ಕಾರವು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಇದು ಕಾನೂನುಬಾಹಿರ ಎಂಬ ಕಾರಣಕ್ಕೆ ಸರ್ಕಾರ ಅವರ ನೇಮಕಾತಿ ರದ್ದು ಮಾಡಿರುವುದು ಸರಿಯಾದ ನಿರ್ಧಾರ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000 ಸೆಕ್ಷನ್ 28ಜಿ ಪ್ರಕಾರ ಖ್ಯಾತ ಶಿಕ್ಷಣ ತಜ್ಞರನ್ನು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಬೇಕು. ಆದರೆ, ನಿಯಮಗಳನ್ನು ಗಾಳಿಗೆ ತೂರಿದ ಹಿಂದಿನ ಸರ್ಕಾರ ದಿನಸಿ ವ್ಯಾಪಾರಿಗಳು, ವಕೀಲರು, ಗುಮಾಸ್ತರು, ಉದ್ಯಮಿಗಳನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಇಬ್ಬರು ಉದ್ಯಮಿಗಳು, ಇಬ್ಬರು ವಕೀಲರು, ಒಬ್ಬ ನಿವೃತ್ತ ಪ್ರಾಂಶುಪಾಲ ಹಾಗೂ ಬಿಜೆಪಿ ಕಾರ್ಯಕರ್ತರೊಬ್ಬರನ್ನು ನೇಮಕ ಮಾಡಲಾಗಿತ್ತು. ಇಬ್ಬರು ಉದ್ಯಮಿಗಳ ಪೈಕಿ ಒಬ್ಬ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದರು.

ಗುಮಾಸ್ತರಾಗಿದ್ದು, ಆ ನಂತರ ಉನ್ನತ ಶಿಕ್ಷಣ ಪಡೆದ ಟಿ.ಎಚ್.ಶ್ರೀನಿವಾಸಯ್ಯ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ನೇಮಕ ಮಾಡಲಾಗಿತ್ತು. ರಾಜ್ಯದ ಎಲ್ಲ ವಿ.ವಿ.ಗಳ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ನಿಯಮಗಳ ಪಾಲನೆ ಆಗಿಲ್ಲ ಎಂದು ದೂರಿದರು.

ಪ್ರತಿಯೊಂದು ವಿವಿಯ ಸಿಂಡಿಕೆಟ್‌ಗೆ ಆರು ಜನರನ್ನು ನಾಮನಿರ್ದೇಶನ ಮಾಡಲು ಸರ್ಕಾರಕ್ಕೆ ಅಧಿಕಾರ ಇದೆ. ಹಿಂದಿನ ಸರ್ಕಾರ ಪಕ್ಷ ಹಾಗೂ ಆರ್‌ಎಸ್‌ಎಸ್ ಕಡೆಯಿಂದ ತಲಾ ಮೂವರನ್ನು ನೇಮಕ ಮಾಡಿತ್ತು. ಹೀಗಾಗಿ ಹಿಂದೆ ನೇಮಕಗೊಂಡಿರುವವರನ್ನು ತೆಗೆದಿರುವುದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT