ADVERTISEMENT

ಸಾಂಸ್ಕೃತಿಕ ನೀತಿ ರೂಪಿಸುವ ಅಗತ್ಯವಿಲ್ಲ

ಸಾಹಿತ್ಯ ಸಂಭ್ರಮದ ಸಮಾರೋಪದಲ್ಲಿ ಭೈರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜನವರಿ 2014, 20:10 IST
Last Updated 19 ಜನವರಿ 2014, 20:10 IST

ಧಾರವಾಡ: ‘ರಾಜ್ಯದಲ್ಲಿ ಸಾಂಸ್ಕೃತಿಕ ನೀತಿಯನ್ನು ಸರ್ಕಾರ ರೂಪಿಸುವ ಅಗತ್ಯ­­­ವಿಲ್ಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿರುವ ಕಾನೂನು ತೆಗೆದುಹಾಕಲು ಸಾಹಿತಿ­ಗಳೆಲ್ಲ ಒಟ್ಟಾಗಿ ಕೋರ್ಟ್‌ನಲ್ಲಿ ದಾವೆ ಹೂಡಬೇಕು’ ಧಾರವಾಡ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾ­ರಂಭದಲ್ಲಿ ಭಾನು­ವಾರ ಹಿರಿಯ ಸಾಹಿತಿ ಎಸ್‌.ಎಲ್‌.­­ಭೈರಪ್ಪ ವ್ಯಕ್ತಪಡಿಸಿದ ಸ್ಪಷ್ಟವಾದ ಅಭಿಪ್ರಾಯಗಳಿವು.

‘ಸದ್ಯದ ಸರ್ಕಾರ ಸಾಂಸ್ಕೃತಿಕ ನೀತಿ­ಯನ್ನು ರೂಪಿಸಲು ಸಮಿತಿ ರಚಿಸಿದೆ. ಸಾಂಸ್ಕೃತಿಕ ನೀತಿಗೂ ಸರ್ಕಾರಕ್ಕೂ ಏನು ಸಂಬಂಧ? ಈ ಸಂಗತಿಯಲ್ಲಿ ಅದು ಏಕೆ ತಲೆ ಹಾಕಬೇಕು’ ಎಂದು ಅವರು ಪ್ರಶ್ನಿಸಿದರು.

‘ಸಾಹಿತ್ಯ, ಸಂಗೀತ, ನೃತ್ಯ, ಜಾನ­ಪದ ಮತ್ತಿತರ ಸಾಂಸ್ಕೃತಿಕ ಕ್ಷೇತ್ರಗಳು ಸರ್ಕಾರದಿಂದ ಪಡೆದಿರುವುದಾದರೂ ಏನು? ಈ ಕ್ಷೇತ್ರಗಳ ಮೇಲೆ ಅದು ಸವಾರಿ ಮಾಡುವ ಅಗತ್ಯವಾದರೂ ಏನು’ ಎಂದು ಕೇಳಿದರು.

‘ಪ್ರತಿವರ್ಷ ಒಂದಿಷ್ಟು ಜನ ಸಾಹಿತಿ­ಗಳಿಗೆ ಪ್ರಶಸ್ತಿ ನೀಡುವುದು ಮತ್ತು ಅವರ ಮಧ್ಯೆ ಹೊಟ್ಟೆಕಿಚ್ಚು ಉಂಟು ಮಾಡುವುದಷ್ಟೇ ಸರ್ಕಾರದ ಕೆಲಸ­ವಾಗಿದೆ’ ಎಂದು ಅಭಿಪ್ರಾಯ­ಪಟ್ಟರು.

‘ವಿಶ್ವವಿದ್ಯಾಲಯಗಳಲ್ಲಿ ಸಂಗೀತ ವಿಭಾಗಗಳಿವೆ. ಸಂಗೀತಕ್ಕೂ ಒಂದು ವಿ.ವಿ ಇದೆ. ಯಾವ ವಿ.ವಿ ಕೂಡ ಇದುವರೆಗೆ ಒಬ್ಬ ಸಂಗೀತಗಾರನನ್ನೂ ಸೃಷ್ಟಿ ಮಾಡಿಲ್ಲ. ಸಾಂಪ್ರದಾಯಿಕ ಪದ್ಧತಿ­ಯಲ್ಲೇ ಕಲಿತವರು ಸಂಗೀತ­ಗಾರ­ರಾಗಿ ಹೊರಹೊಮ್ಮಿದ್ದಾರೆ. ಚೆನ್ನಾಗಿ ಹಾಡುವವರನ್ನು ಜನರೇ ಗುರುತಿಸು­ತ್ತಾರೆ. ಸಾಂಸ್ಕೃತಿಕ ವಿಷಯ­ಗಳನ್ನು ಜನರ ತೀರ್ಮಾನಕ್ಕೇ ಬಿಡಬೇಕು’ ಎಂದು ತಿಳಿಸಿದರು. ‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಾನೂನಿನ ಅಸ್ತ್ರ ಬಳಕೆ ಮಾಡುತ್ತಿ­ರುವುದು ತೀರಾ ಅಪಾಯಕಾರಿ ಸಂಗತಿ.

ಕಾನೂನು ಇದ್ದಮೇಲೆ ಅದು ಖಂಡಿತ­ವಾಗಿಯೂ ದುರುಪ­ಯೋಗ ಆಗುತ್ತದೆ. ಈ ಕಾನೂನು ತೆಗೆದು­ಹಾಕಲು ಸಾಹಿತಿಗಳೆಲ್ಲ ಸಂಘ ಕಟ್ಟಿಕೊಂಡು ಕೋರ್ಟ್‌ನಲ್ಲಿ ದಾವೆ ಹೂಡಬೇಕು. ಅದಕ್ಕೆ ಬೇಕಾದ ಹಣವನ್ನು ದೇಣಿಗೆ ಮೂಲಕ ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

‘ಕನ್ನಡದ ಸಾಹಿತಿಗಳು ಮಾತ್ರವಲ್ಲದೆ ಅಕ್ಕ–ಪಕ್ಕದ ರಾಜ್ಯಗಳ ಇತರ ಭಾಷೆಗಳ ಸಾಹಿತಿಗಳ ಸಹಕಾರವನ್ನೂ ಪಡೆಯಬೇಕು’ ಎಂದು ತಿಳಿಸಿದರು. ‘ನಾನು ಅಗತ್ಯವಾದ ಎಲ್ಲ ಸಹಕಾರ ನೀಡು­ತ್ತೇನೆ. ಈಗಲೇ ದೇಣಿಗೆ ನೀಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.

ಅಸಹ್ಯ ಮೂಡಿಸುವ ವಿದ್ಯಮಾನ: ‘ಧಾರವಾಡ ಸಾಹಿತ್ಯ ಸಂಭ್ರಮ ಹಾಗೂ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ಅನುದಾನ ಕೇಳಬಾರದು. ಕೊನೆಯ ಗಳಿಗೆವರೆಗೆ ಹಣ ಕೊಡದೆ ಸತಾಯಿ­ಸುವುದು, ಅದಕ್ಕಾಗಿ ಕಸಾಪ ಅಧ್ಯಕ್ಷರು ಉಪವಾಸ ಕೂಡುತ್ತೇನೆ ಎನ್ನುವುದು, ಇಂತಹ ವಿದ್ಯಮಾನಗಳು ಅಸಹ್ಯ ಹುಟ್ಟಿಸುತ್ತವೆ’ ಎಂದು ತಿಳಿಸಿದರು.

‘ಕಾಲದಿಂದ ಕಾಲಕ್ಕೆ ಸಾಹಿತ್ಯದ ಅರ್ಥವ್ಯಾಪ್ತಿ ಬದಲಾಗು­ತ್ತಲೇ ಇದೆ. ಪುಸ್ತಕದ ಅಂಗಡಿಯಲ್ಲಿ ಸಿಕ್ಕಿದ್ದಷ್ಟೇ ಸಾಹಿತ್ಯ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿರುವಾಗ ಧಾರವಾಡ ಸಂಭ್ರಮ ಹೊಸ ಹಾದಿಗಳನ್ನು ತೋರಿದೆ’ ಎಂದು ಹಂಪಿ ಕನ್ನಡ ವಿಶ್ವ­ವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಮೆಚ್ಚುಗೆ ವ್ಯಕ್ತಪಡಿ­ಸಿದರು.

‘ಸಂಭ್ರಮದಿಂದ ಸಾಹಿತ್ಯದ ಮಗ್ಗಲುಗಳು ವಿಸ್ತರಣೆಗೊಂಡಿವೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಕ್ಕಳ ಸಾಹಿತ್ಯದ ಚರ್ಚೆಯೂ ಇಲ್ಲಿ ನಡೆದಿದೆ’ ಎಂದು ಹೇಳಿದರು.
‘ಸಾಹಿತಿಗಳು ಮತ್ತು ಭಾಷಾತಜ್ಞರು ತಂತ್ರಜ್ಞಾನದ ಪರಿಣಾಮವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಸಾಂಸ್ಕೃತಿಕ ಬಿಕ್ಕಟ್ಟು ಎದುರಿಸಬೇ­ಕಾಗುತ್ತದೆ. ಬ್ಲಾಗ್‌ನಲ್ಲಿ ಹರಡುತ್ತಿರುವ ಸಾಹಿತ್ಯ ಮತ್ತು ಅದರ ನೈತಿಕ ಪ್ರಶ್ನೆ ಬಹುಮುಖ್ಯವಾಗಿದೆ’ ಎಂದು ತಿಳಿಸಿದರು.

ಅಸ್ಪೃಶ್ಯತೆ ತೊಡೆದುಹಾಕಿದ ಉತ್ಸವ: ‘ಸಾಹಿತಿಗಳ ಅಸ್ಪೃಶ್ಯತೆ­ಯನ್ನು ಈ ಉತ್ಸವ ತೊಡೆದುಹಾಕಿದೆ’ ಎಂದು ಅಭಿಮಾನದಿಂದ ನುಡಿದರು.
ಮೂರು ದಿನಗಳ ಸಂಭ್ರಮದ ನೋಟಗಳನ್ನು ಮುಂದಿಟ್ಟ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಸಂವಾದವೇ ಅಪರೂಪ­ವಾದ ಈ ಸಂದರ್ಭ­ದಲ್ಲಿ ಸಾಹಿತ್ಯ ಸಂಭ್ರಮ ಅದನ್ನು ಸಾಧ್ಯವಾ­ಗಿಸಿದೆ. ಉಜ್ವಲ ಅಧ್ಯಾಯವೊಂದನ್ನು ತೆರೆದಿದೆ’ ಎಂದು ಕೊಂಡಾಡಿದರು.

‘ಸಾಹಿತ್ಯವು ಧರ್ಮ, ರಾಜಕೀಯ ಮತ್ತು ಸಮಾಜದ ಜತೆಗೂ ಸಂವಾದ ನಡೆಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಕೆಲವು ಗೋಷ್ಠಿಗಳಿಗೆ ಸಮಯ ಸಾಕಾಗಲಿಲ್ಲ. ನಡುವೆ ತುಸು ವಿರಾಮ ಬೇಕಿತ್ತು’ ಎಂದ ಅವರು, ‘ಸಮರ್ಥರ ಆಯ್ಕೆಯಿಂದ ಚರ್ಚೆಗಳು ಕಳೆಗಟ್ಟಿದ್ದವು’ ಎಂದು ಹೇಳಿದರು.

‘ಪ್ರಭುತ್ವ ಹಾಗೂ ಸೃಜನಶೀಲತೆ­ಯನ್ನು ಪಂಪ ನಿಭಾಯಿಸಿದ ರೀತಿ ಸಾಹಿತ್ಯವು ಧರ್ಮ ಹಾಗೂ ರಾಜಕೀಯದ ಪ್ರಭಾವಕ್ಕೆ ಸಿಕ್ಕು ನಲುಗುತ್ತಿರುವ ಈ ಸಂದರ್ಭ­ದಲ್ಲಿ ಮಾದರಿಯಾಗಬೇಕಿದೆ, ಮಾರ್ಗದರ್ಶನ ನೀಡಬೇಕಿದೆ’ ಎಂದರು.ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌.ಬಿ. ವಾಲಿಕಾರ, ‘ಸಾಹಿತ್ಯ ಸಂಭ್ರಮದ ಕಾರ್ಯಕ್ರಮಗಳು ವಿ.ವಿ ಸಭಾಂಗಣದಲ್ಲಿ ತಪ್ಪದೇ ನಡೆಯುವಂತಾ­ಗಲು ಟ್ರಸ್ಟ್‌, ವಿ.ವಿ­ಯೊಂದಿಗೆ ಒಪ್ಪಂದ ಮಾಡಿಕೊಳ್ಳ­ಬೇಕು’ ಎಂದು ಸಲಹೆ ನೀಡಿದರು.

ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ನ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದ­ರಾಜ, ‘ಇನ್ನುಮುಂದೆ ಸಂಭ್ರಮವನ್ನು ಎರಡು ವರ್ಷಕ್ಕೊಮ್ಮೆ ನಡೆಸುವ ಯೋಚನೆ ಇದೆ. ವಿ.ವಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ’ ಎಂದರು.

‘ಸರ್ಕಾರದಿಂದ ಅನುದಾನ ಪಡೆದರೆ ಅದು ಇರುವಷ್ಟು ಕಾಲ ಋಣ ಇರುತ್ತದೆ. ಖಾಸಗಿ ವ್ಯಕ್ತಿಗಳಿಂದ ದೇಣಿಗೆ ಪಡೆದರೆ ಅವರ ಋಣದಲ್ಲಿ ಸದಾಕಾಲ ಇರಬೇಕು. ನಂತರ ಅವರ ಸವಾರಿಯನ್ನೂ ಸಹಿಸಿಕೊಳ್ಳಬೇಕು. ಹೀಗಾಗಿ ಸರ್ಕಾರಿ ಅನುದಾನವೇ ಸಾಕು’ ಎಂದು ಅವರು ಹೇಳಿದರು.

ಸಾಹಿತ್ಯ ಸಂಭ್ರಮದ ಗೋಷ್ಠಿಗಳ ಲಿಂಕ್ : –

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.