ADVERTISEMENT

ಹರ್ಷ ತಂದ ಮುಂಗಾರು;ಕೃಷಿ ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ಹರ್ಷ ತಂದ ಮುಂಗಾರು;ಕೃಷಿ ಕಾರ್ಯ ಆರಂಭ
ಹರ್ಷ ತಂದ ಮುಂಗಾರು;ಕೃಷಿ ಕಾರ್ಯ ಆರಂಭ   

ಬೆಂಗಳೂರು: ಮುಂಗಾರು ಪೂರ್ವ ಮಳೆ ನಾಡಿನ ರೈತರಲ್ಲಿ ಹರ್ಷ ತಂದಿದ್ದು, ರಾಜ್ಯದಲ್ಲಿ ಕೃಷಿ ಚಟುವಟಿಕೆ ಬಿರುಸಿನಿಂದ ಆರಂಭಗೊಂಡಿದೆ.

ತಕ್ಷಣವೇ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತಲೂ ಶೇ 51 ರಷ್ಟು ಹೆಚ್ಚಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಶೇ 92 ರಷ್ಟು ಭಾಗದಲ್ಲಿ ಬಿತ್ತನೆ ಆಗಿದೆ.

ADVERTISEMENT

ಒಟ್ಟು 30 ಜಿಲ್ಲೆಗಳ ಪೈಕಿ 26 ಜಿಲ್ಲೆಗಳಲ್ಲಿ ಅಧಿಕ, 3 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮತ್ತು ರಾಯಚೂರು ಜಿಲ್ಲೆಯಲ್ಲಿ ಮಾತ್ರ ಮಳೆಯ ಕೊರತೆ ಉಂಟಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಪೂರ್ವ ಮಳೆಯಲ್ಲಿ ಇದೊಂದು ದಾಖಲೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದ ಒಟ್ಟು ಭೂ– ಭಾಗದಲ್ಲಿ ಶೇ. 88 ರಷ್ಟು ಪ್ರದೇಶದಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ಶೇ 12 ರಷ್ಟು ಭಾಗದಲ್ಲಿ ಮಾತ್ರ ಕೊರತೆ ಆಗಿದೆ. ಮೇ ತಿಂಗಳಲ್ಲಿ ಉತ್ತಮ ಮಳೆ ಆಗಿರುವುದರಿಂದ ಅಣೆಕಟ್ಟುಗಳಿಗೆ ಒಳಹರಿವು ಹೆಚ್ಚಾಗಿತ್ತು. ಇದರಿಂದ ನೀರಿನ ಸಂಗ್ರಹ ಸ್ಥಿತಿ ಉತ್ತಮಗೊಂಡಿದೆ ಎಂದೂ ಅವರು ಹೇಳಿದರು.

ಬಿತ್ತನೆ ಬೀಜ ಪೂರೈಕೆಗೆ ಸೂಚನೆ: ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ತಕ್ಷಣವೇ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು.

ಶನಿವಾರ ವಿಧಾನಸೌದಲ್ಲಿ ನಡೆದ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮುಂಗಾರು ಮಳೆ ಮೂರು ದಿನ ಮುಂಚಿತವಾಗಿಯೇ ಆರಂಭವಾಗಿದೆ. ಇನ್ನೂ ಕೆಲವು ದಿನ ಉತ್ತಮವಾಗಿಯೇ ಮುಂದುವರಿಯಲಿದೆ ಎಂದರು.

ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಕಳಪೆ ಬೀಜ ಮತ್ತು ರಾಸಾಯನಿಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿಯೂ ಕುಮಾರಸ್ವಾಮಿ ಎಚ್ಚರಿಸಿದರು.

ಮಂಡ್ಯದಲ್ಲಿ ಇಸ್ರೇಲ್‌ ಮಾದರಿ ಕೃಷಿ: ‘ಇಸ್ರೇಲ್ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಕೃಷಿ ಚಟುವಟಿಕೆ ಅಧ್ಯಯನ ಮಾಡಿದ್ದೇನೆ.  ನಮ್ಮ ರಾಜ್ಯದಲ್ಲೂ ಇಸ್ರೇಲ್ ಮಾದರಿ ಕೃಷಿಯನ್ನು ತರಬೇಕೆಂದು  ಉದ್ದೇಶಿಸಿದ್ದೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ಇದಕ್ಕಾಗಿ ಮಂಡ್ಯದಲ್ಲಿ ಸುಮಾರು 900 ಎಕರೆ ಭೂಮಿಯಲ್ಲಿ ಇಸ್ರೇಲ್ ಮಾದರಿ ಕೃಷಿಯನ್ನು ಮಾಡಲು ಪ್ರಾಯೋಗಿಕ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ರೈತರಿಗೆ ನೆರವು ನೀಡಲು ಇಸ್ರೇಲ್‌ ಪರಿಣಿತರನ್ನು ಕರೆಸಲಾಗುವುದು ಎಂದೂ ತಿಳಿಸಿದರು.

ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸುಮಾರು ₹1500 ಕೋಟಿ  ಬಾಕಿ ಕೊಡಬೇಕಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಮಧ್ಯ ಪ್ರವೇಶಿಸಬೇಕಾಗಿದ್ದು ತಾವು ಕೇಂದ್ರ ಸರ್ಕಾರದೊಂದಿಗೆ ಮಾತನಾಡುವುದಾಗಿಯೂ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.