ADVERTISEMENT

ಹಿತ್ತಿಲಿನಿಂದ ಜಗಲಿಗೆ ಬಂದ ಮಹಿಳಾ ಸಾಹಿತ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2013, 19:36 IST
Last Updated 10 ಫೆಬ್ರುವರಿ 2013, 19:36 IST

ವಿಜಾಪುರ: `ಮಹಿಳಾ ಸಾಹಿತ್ಯ ವ್ಯಕ್ತಿಗತ ವ್ಯವಸ್ಥೆಯಿಂದ ಬಹುತ್ವದ ಕಡೆಗೆ ಹೊರಳು ಹಾದಿ ಹಿಡಿದಿರುವುದು ಹೊಸ ಬೆಳವಣಿಗೆ. ಎಲ್ಲ ಪ್ರಗತಿಪರ ಚಳವಳಿಗಳು ಮಾನವೀಯ ನೆಲೆಯಲ್ಲಿ ಸ್ತ್ರೀ ರೂಪ ಪಡೆಯುತ್ತಿರುವುದು ವಾಸ್ತವದ ಪ್ರತಿಬಿಂಬ' ಎಂದು ವಿಮರ್ಶಕಿ ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.

ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಭಾನುವಾರ ಜರುಗಿದ `ಮಹಿಳಾ ಸಾಹಿತ್ಯ: ಹೊಸ ಚಿಂತನೆಯಡೆಗೆ' ವಿಷಯದ ಕುರಿತ ಗೋಷ್ಠಿಯಲ್ಲಿ ಅವರು ಆಶಯ ನುಡಿ ಆಡಿದರು.

`ಮಹಿಳಾ ಕನ್ನಡ ಸಾಹಿತ್ಯ ಸಾಮಾಜಿಕ ನಿಶ್ಚಿತತೆಯ ಮಧ್ಯೆ ಸ್ತ್ರೀ ಅಸ್ಮಿತೆ ಸೇರಿಕೊಂಡಿದೆ. ಭಿನ್ನ ಸಂವೇದನೆಗಳಿಗೆ ಏಕರೂಪತೆ ನೀಡಿದೆ. ಸಾಹಿತ್ಯ ಒಲವು- ನಿಲುವು ಸಾಮಾಜಿಕ ವಾಸ್ತವಿಕತೆಗೆ ಸ್ಪಂದಿಸುತ್ತಲೇ ಹಿತ್ತಿಲಿನಿಂದ ಜಗಲಿಗೆ ಬಂದಿದೆ' ಎಂದರು.

`ಮಹಿಳಾ ಸಾಹಿತ್ಯ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಪಿತೃ ಪ್ರಧಾನ ಅರ್ಥಾತ್ ಯಜಮಾನಿಕೆ ಮತ್ತು ಸ್ತ್ರೀ ಅನನ್ಯತೆ ಪ್ರಮುಖವಾದುದು. ಮಹಿಳೆ- ಪುರುಷ ದ್ವಿತ್ವದಲ್ಲಿ ನಾನಿಲ್ಲದೆ ನೀನಿಲ್ಲ ಎಂಬ ವಾದ, ಗಂಡಸಿನ ಅಸ್ಮಿತೆಯನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಮಹಿಳಾ ಸಾಹಿತಿಗಳನ್ನು ಕಟ್ಟಿಹಾಕಿದೆ. ಜೈವಿಕ ಬದ್ಧತೆಯ ಜೊತೆಗೆ ಸ್ತ್ರೀಗೆ ಸ್ವತಂತ್ರವಾದ ಬದುಕಿದೆ ಎಂಬ ವಾಸ್ತವ ಮುಚ್ಚಿ ಹೋಗುತ್ತದೆ' ಎಂದರು.

`ಲೇಖಕಿ ಎಂದು ಗುರುತಿಸಿಕೊಂಡವರೂ ಸ್ತ್ರೀ ವಾದಿ ಎಂದು ಒಪ್ಪಿಕೊಳ್ಳಲು ಭಯ ಪಡುತ್ತಾರೆ. ಆತಂಕ ಅವರನ್ನು ಕಾಡುತ್ತಿದೆ. ಅನನ್ಯತೆ ಅಂತಹವರಿಗೆ ಶತ್ರುವಾಗುತ್ತಿದೆ. ಇತ್ತೀಚಿನ ಪ್ರಗತಿಪರ ಚಳವಳಿಗಳಲ್ಲಿ ಸ್ತ್ರೀ ಸ್ವರೂಪ ಕಾಣಿಸುತ್ತಿದೆ. ಚಳವಳಿಗೆ ಗಾಂಧೀಜಿ ಉಪ್ಪು, ಪೊರಕೆ ಬಳಸಿಕೊಂಡಿದ್ದರು. ಅವೆಲ್ಲವೂ ಹೆಣ್ತನ ಎಂದೇ ಪರಿಭಾವಿಸಿಕೊಳ್ಳಬಹುದು. ನದಿ, ಭೂಮಿ ಉಳಿಸಿಕೊಳ್ಳುವ ಸಾಮಾಜಿಕ ಪ್ರಕ್ರಿಯೆಯೂ ಹೆಣ್ತನದ ಭಾಗವೇ ಆಗಿದೆ' ಎಂದರು.

`ಮಹಿಳಾ ಸಾಹಿತ್ಯ ಪರಿಕಲ್ಪನೆಯಲ್ಲಿ ಪುರುಷ' ವಿಷಯದ ಮಾತನಾಡಿದ ಡಾ. ಎಚ್. ಶಶಿಕಲಾ, ಜಾಗತೀಕರಣದ ಭರದಲ್ಲಿ ವಸ್ತ್ರ, ಆಭರಣಗಳ ಪ್ರದರ್ಶನಕ್ಕೆ ಮಹಿಳೆ ವಸ್ತು ಆಗುತ್ತಿದ್ದಾಳೆ. ಆಧುನೀಕರಣಕ್ಕೆ ಮೊದಲು ಬಲಿಯಾಗುವವಳೇ ಹೆಣ್ಣು. ಸಾಹಿತ್ಯ ನಿರೂಪಿಸುವ ಸಂದರ್ಭದಲ್ಲಿ ಮಹಿಳೆ ಆತ್ಮವಿಶ್ವಾಸ, ಧೈರ್ಯ ಬೆಳೆಸಿಕೊಳ್ಳುವ ಮೂಲಕ ಸ್ತ್ರೀ ಸಂವೇದನೆ ವ್ಯಕ್ತ ಪಡೆಸಬೇಕಿದೆ' ಎಂದರು.

`ಮಹಿಳೆಯರ ವರ್ತಮಾನದ ಬದುಕಿನ ತಲ್ಲಣಗಳು' ವಿಷಯದಲ್ಲಿ ಮಾತನಾಡಿದ ವೀಣಾ ಹೂಗಾರ, `ದೌರ್ಜನ್ಯ, ಕಿರುಕುಳ, ಅತ್ಯಾಚಾರ, ಅನಾಚಾರ, ಆಸಿಡ್ ದಾಳಿ ಹೀಗೆ ಮಹಿಳೆಯರ ಮೇಲಿನ ದಾಳಿ ಹೆಚ್ಚುತ್ತಿರುವುದು ಆತಂಕಕಾರಿ. ಹೆಣ್ಣು ಮಗು ಜನಿಸುವುದು  ಇವತ್ತು ಬೇಡವಾಗಿದೆ. ಹುಟ್ಟು ಪಡೆಯಲು ಆಕೆಗೆ ಸ್ವಾತಂತ್ರ್ಯ ಇಲ್ಲವೇ? ಎಂದು ಪ್ರಶ್ನಿಸಿದರು.

`ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ 25 ಲಕ್ಷ ಗರ್ಭಪಾತವಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಸಂಖ್ಯೆ 1.10 ಕೋಟಿಗೂ ಹೆಚ್ಚು ಎನ್ನುವುದು ಇತ್ತೀಚಿನ ಅಂಕಿ ಅಂಶವಾಗಿದೆ. `ದೆಹಲಿಯಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣ ಬಳಿಕ, ರಾತ್ರಿ ಪಾಳಿಯ ಅನೇಕ ಮಹಿಳೆಯರು ಕೆಲಸ ಬಿಟ್ಟಿದ್ದಾರೆ. ಕೆಲವರು ಕೆಲಸಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ.
 ದೆಹಲಿ ವಿವಿ ಸಹಿತ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಅನೇಕರು ಶಿಕ್ಷಣವನ್ನು ಅರ್ಧಕ್ಕೆ ಕೊನೆಗೊಳಿಸಿದ್ದಾರೆ. ಮಹಿಳೆಯರ ಆತ್ಮವಿಶ್ವಾಸ ಎಷ್ಟರ ಮಟ್ಟಿಗೆ ಕುಸಿದಿದೆ ಎನ್ನುವುದಕ್ಕೆ ಇದು ನಿದರ್ಶನ' ಎಂದರು.

`ಜಾತಿ, ಕೋಮುವಾದಕ್ಕೆ ಬಲಿಯಾಗುವ ಮಹಿಳೆಯರು, ದುಡಿಯುವ ಆತುರದಲ್ಲಿ ಯಾರಲ್ಲೂ ಹೇಳಿಕೊಳ್ಳಲಾಗದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ಲಾಮರ್ ಕ್ಷೇತ್ರ ಅದಕ್ಕೆ ಒಳ್ಳೆಯ ಉದಾಹರಣೆ. ಉದ್ಯೋಗದಲ್ಲಿರುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ- ಆತಂಕ ಸಂಘಟಿತ ಕ್ಷೇತ್ರದಲ್ಲಿ ಒಂದು ರೀತಿಯಾದರೆ, ಅಸಂಘಟಿತ ಕ್ಷೇತ್ರದಲ್ಲಿ ಇನ್ನೊಂದು ರೀತಿಯದು. ಸಾಂಸ್ಕೃತಿಕ ಅಧಃಪತನಕ್ಕೆ ಇದೂ ದಾರಿಯಾಗುತ್ತದೆ' ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್, `ಸಮೂಹ ಮಾಧ್ಯಮ ಮತ್ತು ಮಹಿಳೆ' ಕುರಿತು ಮಾತನಾಡಿ, `ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿನ ಮನಃಸ್ಥಿತಿ ಬದಲಾಗಿಲ್ಲ, ಬದಲಾಗುವುದೂ ಇಲ್ಲ' ಎಂದರು.

`ಮಹಿಳೆಯೊಬ್ಬರ ಮೇಲೆ ಜರುಗಿದ ಅತ್ಯಾಚಾರ, ಕಿರುಕುಳ ಪ್ರಕರಣದ ಸುದ್ದಿಗಿಂತಲೂ ಫ್ಯಾಷನ್ ಶೋ ಸಂದರ್ಭದಲ್ಲಿ ಲಲನೆಯೊಬ್ಬಳ ಉಡುಗೆ ಬಿಚ್ಚಿಕೊಂಡರೆ ಅದೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದೆ' ಎಂದ ಅವರು, `ಮಹಿಳೆಯರು ಸಾಮಾಜಿಕ ಚೌಕಟ್ಟಿನಿಂದ ಹೊರಗೆ ಬರಬೇಕು. ಈ ನಿಟ್ಟಿನಲ್ಲಿ ಸಮಾಜ ಮತ್ತು ಮಾಧ್ಯಮದ ಹೊಣೆಯೂ ಬದಲಾಗಬೇಕು' ಎಂದು ಆಶಿಸಿದರು.   ಸುಮಂಗಲಾ ಕೋಳೂರು ಕಾರ್ಯಕ್ರಮ ನಿರ್ವಹಿಸಿದರು. ಸಾವಿತ್ರಿಮಜುಂದಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.