ADVERTISEMENT

ಹಿನ್ನೀರಿನಲ್ಲಿ ತೇಲುತ್ತಿರುವ ಆನೆಗೆಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST
ಹಿನ್ನೀರಿನಲ್ಲಿ ತೇಲುತ್ತಿರುವ ಆನೆಗೆಚಿಕಿತ್ಸೆ
ಹಿನ್ನೀರಿನಲ್ಲಿ ತೇಲುತ್ತಿರುವ ಆನೆಗೆಚಿಕಿತ್ಸೆ   

ಎಚ್.ಡಿ.ಕೋಟೆ: ಕಾಲುನೋವಿನಿಂದ ಬಳಲುತ್ತಾ ತಾರಕ ಅಣೆಕಟ್ಟೆಯ ಹಿನ್ನೀರಿನಲ್ಲಿ ಆಶ್ರಯ ಪಡೆದಿರುವ ಆನೆಗೆ ಬುಧವಾರ ಪಶು ವೈದ್ಯರು ನೋವು ನಿವಾರಕ ಚುಚ್ಚುಮದ್ದು ನೀಡಿದ್ದಾರೆ. ಈ ಆನೆ ಕಳೆದ ತಿಂಗಳೂ ಹೀಗೆಯೇ ನೀರಿನಲ್ಲಿ ನರಳುತ್ತಿತ್ತು. ಆಗ ಪಶುವೈದ್ಯರು ನೀಡಿದ ಚಿಕಿತ್ಸೆಯ ನಂತರ ಕಾಡು ಸೇರಿತ್ತು. ಈಗ ಮತ್ತೆ ಕಾಲಿನ ಊತ ಇನ್ನಷ್ಟು ಹೆಚ್ಚಾಗಿದೆ. ಈ ಆನೆ ದೇಹದ ಭಾರ ಮತ್ತು ನೋವನ್ನು ತಳಲಾರದೆ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವನ್ಯಜೀವಿ  ವಲಯದಲ್ಲಿರುವ ತಾರಕ ಅಣೆಕಟ್ಟೆಯ ಹಿನ್ನೀರಿನಲ್ಲಿ ಕಳೆದ ಮೂರು ದಿನಗಳಿಂದ ಅರ್ಧ ಮುಳುಗಿ, ಸೊಂಡಿಲನ್ನು ಮೇಲೆತ್ತಿ ನಿಂತಿದೆ.

ಗಾರ್ಡ್‌ಗಳು ಈ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಿದ್ದರು. ಇದರಿಂದ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಬುಧವಾರ ಬೆಳಿಗ್ಗೆ  ಅರಣ್ಯ ಇಲಾಖೆಯ ಪಶುವೈದ್ಯರೊಂದಿಗೆ ದೋಣಿಯ ಮೂಲಕ ಆನೆ ಇರುವ ಜಾಗವನ್ನು ತಲುಪಿ ನೋವು ನಿವಾರಕ ಮತ್ತು ಜೀವ ರಕ್ಷಕ  ಔಷಧಿಯನ್ನು ನೀಡಿದರು. ಆದರೆ ಆನೆಯನ್ನು ಹಿನ್ನೀರಿನಿಂದ ಹೊರಗೆ ತರಲು ಸಾಧ್ಯವಾಗಲಿಲ್ಲ. ಹೀಗಾಗಿ ದಸರಾದಲ್ಲಿ ಪಾಲ್ಗೊಳ್ಳುವ  ಅರ್ಜುನನ್ನು ಕರೆಸಿ ಈ ಆನೆಯನ್ನು ಅಲ್ಲಿಂದ ಹೊರಗೆ ಎಳೆದು ತರುವ ಕಾರ್ಯಾಚರಣೆ ಗುರುವಾರ ನಡೆಯಲಿದೆ.

ಸ್ಥಳಕ್ಕೆ ಸಿಸಿಎಫ್ ಅಜಯ್ ಮಿಶ್ರ, ಡಿಎಫ್‌ಒ ವಿಜಯರಂಜನ್‌ಸಿಂಗ್, ಅರಣ್ಯ ಪಶು ವೈದ್ಯಾಧಿಕಾರಿ  ಡಾ.ನಾಗರಾಜು ಮತ್ತು ಶ್ರೀನಿವಾಸ್ ಹಾಗೂ ವಲಯ ಅರಣ್ಯಾಧಿಕಾರಿ ಸಂತೋಷ್‌ನಾಯಕ್ ಹಾಗೂ ಸಿಬ್ಬಂದಿ  ಆನೆಯ ಆರೈಕೆಯಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.