ADVERTISEMENT

ಹುಲಿ ರಕ್ಷಿತಾರಣ್ಯದಲ್ಲಿ ರಕ್ಷಣೆಯ ಬೆಳಕು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST
ಹುಲಿ ರಕ್ಷಿತಾರಣ್ಯದಲ್ಲಿ ರಕ್ಷಣೆಯ ಬೆಳಕು
ಹುಲಿ ರಕ್ಷಿತಾರಣ್ಯದಲ್ಲಿ ರಕ್ಷಣೆಯ ಬೆಳಕು   

ಹುಬ್ಬಳ್ಳಿ: ಹುಲಿ ಯೋಜನೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕುಟುಂಬಗಳ ಪುನರ್ವಸತಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 10 ಲಕ್ಷ ರೂಪಾಯಿಯಷ್ಟು ಸೌಲಭ್ಯ ಘೋಷಿಸಿರುವುದು ದಾಂಡೇಲಿ- ಅಣಶಿ ಹುಲಿ ರಕ್ಷಿತಾರಣ್ಯದಲ್ಲಿ ವಾಸವಾಗಿರುವ ಕೆಲವು  ಕುಟುಂಬಗಳಲ್ಲಿ ಹೊಸ ಭರವಸೆ ಮೂಡಿಸಿದೆ.

 ಅಣಶಿ-ದಾಂಡೇಲಿ ಹುಲಿ ರಕ್ಷಿತಾರಣ್ಯದಲ್ಲಿರುವ ಕುಟುಂಬಗಳ ಪುನರ್ವಸತಿಗೆ ಇದೇ ಮೊದಲ ಬಾರಿಗೆ ಪ್ರಯತ್ನನಡೆಯುತ್ತಿದ್ದು, ಅಲ್ಲಿನ ಕೆಲವು ಕುಟುಂಬಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ.

 ಹುಲಿ ರಕ್ಷಿತಾರಣ್ಯದ ಕುಳಗಿ ವಲಯದ ಇಂಚೋಳಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ವಾಸವಾಗಿದ್ದು ನಾಗರಿಕ ಸೌಲಭ್ಯದಿಂದ ವಂಚಿತವಾಗಿರುವ ಹಾಗೂ ಹುಲಿ, ಚಿರತೆ ದಾಳಿಗೆ ಸಿಕ್ಕಿ ನಲುಗಿರುವ ಕೇ ಜನ್ನು ಶೇಳ್ಕೆ ಹಾಗೂ ಸಾಗೊಬಾಯಿ ಗೌಳಿ ಕುಟುಂಬ ಪುನರ್ವಸತಿ ಯೋಜನೆಯ ಲಾಭ ಪಡೆಯಲು ಮುಂದಾಗಿದೆ. ಸಾಂಬ್ರಾಣಿ ಪಕ್ಕದ ಮೈನೊಳ್ ಗ್ರಾಮಕ್ಕೆ ಪುನರ್ವಸತಿಗೊಂಡು ನೆಮ್ಮದಿಯ ಜೀವನ ನಡೆಸುವ ಆಶಯ ವ್ಯಕ್ತಪಡಿಸಿದೆ.

 ದಾಂಡೇಲಿ- ಯಲ್ಲಾಪುರ ರಸ್ತೆಯಿಂದ ಎಂಟು ಕಿ.ಮೀ. ದೂರದ ಕಾಡಿನೊಳಗೆ ಶೇಳ್ಕೆ ಕುಟುಂಬ ವಾಸವಾಗಿದೆ. ಶೇಳ್ಕೆ ಗುಡಿಸಲಿಗೆ ಗೋಡೆಯೇ ಇಲ್ಲ! ಗುಡಿಸಲಿನ ಮೂರು ದಿಕ್ಕಿನಲ್ಲಿ ಉದ್ದಕ್ಕೆ ಹಾಗೂ ಅಡ್ಡಕ್ಕೆ ಕಂಬಗಳನ್ನು ನೆಟ್ಟು, ಬಿಗಿದಿರುವುದೇ ಗೋಡೆ! ನೆಲದವರೆಗೆ ಇಳಿದಿದೆ ಹುಲ್ಲಿನ ಮಾಡು.

ಬಾಗಿಲೇ ಇಲ್ಲದ ಒಂದೇ ಸೂರಿನ ಕೋಣೆಯ ಒಂದೊಂದು ಮೂಲೆಯಲ್ಲಿ ದನಕರು, ನಾಯಿ, ಕೋಳಿಗಳ ಜತೆಗೇ ಜನರು ಸಹಜೀವನ ನಡೆಸುತ್ತಿದ್ದಾರೆ.

ನಾಲ್ಕು ದಶಕಗಳಿಂದ ಇದೇ ರೀತಿ ಬದುಕಿರುವ ಈ ಕುಟುಂಬಗಳು ಈಗ ಪುನರ್ವಸತಿ ಸಿಕ್ಕರೆ ಸಾಕು ಎಂಬಂತೆ ಕಾದು ಕುಳಿತಿವೆ. ಇದಕ್ಕೆ ಕಾರಣವಿಷ್ಟೇ. ಅವರಿರುವ ಇಂಚೋಳಿ ಎಂಬ ಈ ಊರು. ದಾಖಲೆಗಳಲ್ಲಿ ಇದೆಯೋ  ಇದೆಯೋ? ಇಲ್ಲವೋ? ಗೊತ್ತಿಲ್ಲ. ಏಕೆಂದರೆ ಇಂಚೋಳಿಯಲ್ಲಿ ಇರುವುದು ಎರಡೇ ಕುಟುಂಬ, ಎರಡೇ ಗುಡಿಸಲು.

ಆ ಗೌಳಿ ಕುಟುಂಬಗಳ ನಾಲ್ಕೈದು ಮಂದಿ ಸದಸ್ಯರು, ಹತ್ತಿಪ್ಪತ್ತು ದನಕರು, ಕೋಳಿ, ನಾಯಿ ಇವಿಷ್ಟೇ ಆ ಊರಿನ ಸದಸ್ಯರು! ಊರಿಗೆ ಕಚ್ಚಾ ಕಾಲು ದಾರಿ ಬಿಟ್ಟರೆ ಬೇರೆ ರಸ್ತೆಯೇ ಇಲ್ಲ. ಒಂದು ಕಿ.ಮೀ. ದೂರದಿಂದ ನೀರು ಹೊತ್ತು ತರಬೇಕು. ಇವರಿರುವ ಪ್ರದೇಶ ಹುಲಿ ರಕ್ಷಿತಾರಣ್ಯದಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶವೂ ಇಲ್ಲ. ಇಂಚೋಳಿಯಲ್ಲಿ ಎರಡೇ ಮನೆ ಇರುವುದರಿಂದ ಜನಪ್ರತಿನಿಧಿಗಳೂ ಅತ್ತ ಸುಳಿಯುವುದಿಲ್ಲ.

 ಜೀವನ ನಿರ್ವಹಣೆಗೆ ಜಾನುವಾರುಗಳನ್ನೇ ಆಶ್ರಯಿಸಿರುವ ಗೌಳಿ ಕುಟುಂಬಕ್ಕೆ ಜನ, ದನಗಳೆಂಬ ಭೇದ ಇಲ್ಲ. ಕಾಡಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಾರೆ. ಬೆಳಿಗ್ಗೆ ಹಾಲು ಕರೆದು ಏಳೆಂಟು ಕಿ.ಮೀ. ದೂರದ ಬಾಗ್ವತಿಗೆ ಅಥವಾ ಅಂಬಿಕಾನಗರಕ್ಕೆ ಹೊತ್ತೊಯ್ದು ಮಾರಾಟ ಮಾಡುತ್ತಾರೆ. ಸಂಜೆ ಹಾಲು ಕಾಯಿಸಿ ಕುಂದ ತಯಾರಿಸಿ ಪಟ್ಟಣಕ್ಕೆ ಒಯ್ದು ಸಿಕ್ಕ ಕಾಸಿಗೆ ಮಾರುತ್ತಾರೆ.

 `ಮನೆ ಸದಸ್ಯರಿಗೆ ರಾತ್ರಿ ಹೊತ್ತು ಕಾಯಿಲೆ ಬಂದರೆ ನರಳುತ್ತಲೇ ಬಿದ್ದಿರ್ತಾರೆ. ಹಗಲಲ್ಲಾದ್ರೆ ಕಂಬಳಿ ಸುತ್ತಿ ಯಲ್ಲಾಪುರಕ್ಕೊ, ದಾಂಡೇಲಿಗೊ ಹೊತ್ತೊಯ್ಯುತ್ತೇವೆ~ ಎನ್ನುತ್ತಾರೆ ಸಾಗೊಬಾಯಿ.

 `ಮೂರ‌್ನಾಲ್ಕು ದಿನಗಳಿಂದ ಎಮ್ಮೆಯೊಂದು ಕಾಣುತ್ತಿಲ್ಲ. ಬಹುಶಃ ಹುಲಿ ಹಿಡಿದಿರಬಹುದು~ ಎಂದು ಅಳಲು ತೋಡಿಕೊಂಡ ಶೇಳ್ಕೆಗೆ ಕಳೆದ ನಾಲ್ಕು ದಶಕಗಳಲ್ಲಿ ಅದೆಷ್ಟು ದನ, ಕರುಗಳನ್ನು ಹುಲಿ, ಚಿರತೆ ಹಿಡಿದಿದೆಯೊ ಲೆಕ್ಕ ಇಲ್ಲ. ಪ್ರತಿ ಬಾರಿ ಹುಲಿ, ಚಿರತೆ ದನಗಳನ್ನು ಹಿಡಿದಾಗ ಸಾವಿರಾರು ರೂಪಾಯಿ ನಷ್ಟ. ಕುಟುಂಬಕ್ಕೆ ಆರ್ಥಿಕ ಹೊಡೆತ. ಪುನರ್ವಸತಿ ಯೋಜನೆಯಿಂದ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಕ್ಕೀತು ಎಂಬುದು ಶೇಳ್ಕೆ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.