ADVERTISEMENT

ಹೊಸ ಜಿಲ್ಲೆಯಲ್ಲಿ ಕೈಗಾರಿಕೆಯ ಕನಸು: 3300 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST
ಹೊಸ ಜಿಲ್ಲೆಯಲ್ಲಿ ಕೈಗಾರಿಕೆಯ ಕನಸು: 3300 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ
ಹೊಸ ಜಿಲ್ಲೆಯಲ್ಲಿ ಕೈಗಾರಿಕೆಯ ಕನಸು: 3300 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ   

ಯಾದಗಿರಿ: ರಾಜ್ಯದ ಕೊನೆಯ ಜಿಲ್ಲೆಯಾಗಿರುವ ಯಾದಗಿರಿ ಸಾಕಷ್ಟು ಸಂಪನ್ಮೂಲಗಳಿದ್ದರೂ ಎಲ್ಲ ದೃಷ್ಟಿಯಿಂದ ಹಿಂದುಳಿದಿದ್ದು, ಹೊಸದಾಗಿ ಕೈಗಾರಿಕೆಗಳನ್ನು ಆರಂಭಿಸಲು ಹಲವು ಪ್ರಸ್ತಾವ ಬಂದಿರುವುದು ನಿರಾಸೆಯ ಕಾರ್ಮೋಡದಲ್ಲಿ ನಿರೀಕ್ಷೆಯ ಮಿಂಚು ಹರಿಯಲು ಕಾರಣವಾಗಿದೆ.

ಒಂದು ಸಕ್ಕರೆ ಕಾರ್ಖಾನೆ ಹೊರತುಪಡಿಸಿ ಇಲ್ಲಿ ಯಾವ ದೊಡ್ಡ ಕೈಗಾರಿಕೆಗಳೂ ಇಲ್ಲ. ಕೇವಲ ಸಣ್ಣಪುಟ್ಟ ಕೈಗಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಅಕ್ಕಿ ಗಿರಣಿ ಮತ್ತು ದಾಲ್ ಮಿಲ್‌ಗಳೇ ಅಧಿಕ. ಈ ಭಾಗದಲ್ಲಿ ಬೆಳೆಯುವ ಭತ್ತ ನೆರೆ ರಾಜ್ಯಗಳಿಗೆ ಹೋಗುತ್ತಿರುವುದರಿಂದ ಅಕ್ಕಿ ಗಿರಣಿಗಳೂ ಸೊರಗುತ್ತಿವೆ. ರೂ.84.16 ಕೋಟಿ ಬಂಡವಾಳದಲ್ಲಿ ಜಿಲ್ಲೆಯಲ್ಲಿ 2,665 ಸಣ್ಣ ಕೈಗಾರಿಕೆಗಳಿದ್ದು, 6567 ಜನರಿಗೆ ಉದ್ಯೋಗಾವಕಾಶ ದೊರೆತಿದೆ.

ಸದ್ಯಕ್ಕೆ ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ಪಟ್ಟಣಗಳಲ್ಲಿ ತಲಾ ಒಂದು ಕೈಗಾರಿಕಾ ವಸಾಹತುಗಳಿದ್ದರೂ, ಸಣ್ಣಪುಟ್ಟ ಕೈಗಾರಿಕೆಗಳಿಗೆ ಸೀಮಿತವಾಗಿವೆ. ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ 22.35 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು, ಈಗಾಗಲೇ ಹಲವು ಕೈಗಾರಿಕೆಗಳ ಪ್ರಾರಂಭಗೊಂಡಿವೆ. ಕೈಗಾರಿಕೆಗಳು ಇಲ್ಲದಿರುವುದರಿಂದ ಉದ್ಯೋಗ ಅರಸಿ ಬೇರೆ ಕಡೆಗೆ ಗುಳೆ ಹೋಗುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾದಗಿರಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಜನರು ಮುಂಬೈ, ಬೆಂಗಳೂರು, ಗೋವಾ ಮತ್ತಿತರ ಕಡೆಗೆ ಗುಳೆ ಹೋಗುತ್ತಿದ್ದಾರೆ.

ವಿಪುಲ ಸಂಪನ್ಮೂಲ: ಕೈಗಾರಿಕೆಗಳ ಸ್ಥಾಪನೆಗೆ ಅವಶ್ಯಕವಾಗಿರುವುದು ನೀರು. ಕೃಷ್ಣಾ-ಭೀಮಾ ನದಿಗಳು ಜಿಲ್ಲೆಯಲ್ಲಿ ಹರಿದಿರುವುದರಿಂದ ನೀರಿಗೆ ಕೊರತೆ ಇಲ್ಲ. ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿ, ಶಹಾಪುರ-ಹೈದಾರಾಬಾದ್ ರಾಜ್ಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದುಹೋಗಿವೆ. ಜೊತೆಗೆ ದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸುವ ರೈಲು ಸೌಲಭ್ಯವೂ ಜಿಲ್ಲೆಯಲ್ಲಿದೆ. ಇದರ ಜೊತೆಗೆ ಕೈಗಾರಿಕೆಗಳ ಸ್ಥಾಪನೆಗೆ ಅವಶ್ಯ ಜಮೀನು ಸಾಕಷ್ಟಿದೆ.

ಜಿಲ್ಲೆಯಲ್ಲಿ ಮ್ಯಾಂಗನೀಸ್, ಸುಣ್ಣದ ಕಲ್ಲು, ಬಾಕ್ಸೈಟ್, ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಕಲ್ಲುಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತವೆ. ಈ ಭಾಗದಲ್ಲಿ ಪ್ರಮುಖವಾಗಿ ಭತ್ತ, ತೊಗರಿ, ಜೋಳ, ಕಡಲೆಕಾಯಿ, ಹತ್ತಿ, ಮೆಣಸಿನಕಾಯಿ, ಸೂರ್ಯಕಾಂತಿ ಮತ್ತು ಕಬ್ಬು ಬೆಳೆಯಲಾಗುತ್ತಿದೆ. ಹೀಗಾಗಿ ಆಹಾರ ಸಂಸ್ಕರಣೆ, ಸಕ್ಕರೆ ಕಾರ್ಖಾನೆ ಹಾಗೂ ಜವಳಿ ಉದ್ಯಮಗಳಿಗೆ ವಿಪುಲ ಅವಕಾಶಗಳಿವೆ.

ಭೂಸ್ವಾಧೀನ ಆರಂಭ:ಬೃಹತ್ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಗೆ ಈಗಾಗಲೇ ಯಾದಗಿರಿ ತಾಲ್ಲೂಕಿನ ಕಡೇಚೂರು, ಬಾಡಿಯಾಲಗಳ ಬಳಿ ಸುಮಾರು 3298 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ.

ಈ ಜಮೀನಿನಲ್ಲಿ ಕೇವಲ ದೊಡ್ಡ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ ಮಾಡಲಾಗುತ್ತಿದೆ. ಕಳೆದ ವರ್ಷ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ  ಭಾರತ ಫೋರ್ಜ್ ಕಂಪೆನಿಯು 270 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಉಷ್ಣ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಮುಂದೆ ಬಂದಿದೆ. ವ್ಯಾಸ ಬಯೋಲೈಫ್, ಸುಪ್ರಿಯಾ ಫಾರ್ಮಾ, ಎಸ್.ವಿ. ಡ್ರಗ್ಸ್ ಆಂಡ್ ಇಂಟರ್‌ಮಿಡಿಯೇಟ್ಸ್, ಸುಧಾ ಫಾರ್ಮಾ, ಮಾಯುಕಾ ಲ್ಯಾಬ್ಸ್, ಓಸಿಯನ್ ಫಾರ್ಮಾಕೋಟ್, ಗೌರಾ ಫಾರ್ಮಾಕೆಮ್, ವೇದ ಲೈಫ್ ಸೈನ್ಸ್, ಜಿನೆಕ್ಸ್ ಕೋಕ್ ಕಂಪೆನಿಗಳು ಔಷಧಿ ತಯಾರಿಕೆ ಘಟಕಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ಹಿಂದುಸ್ತಾನ ಕೋಕೋ ಕೊಲಾ ಕಂಪೆನಿಯ ತಂಪು ಪಾನೀಯ ತಯಾರಿಕೆ ಘಟಕಗಳನ್ನು ಆರಂಭಿಸಲು ಮುಂದಾಗಿವೆ.

ಇದರ ಜೊತೆಗೆ ಸುರಪುರ ತಾಲ್ಲೂಕಿನಲ್ಲಿ ಎರಡು ಸಿಮೆಂಟ್ ತಯಾರಿಕೆ ಘಟಕಗಳನ್ನು ಆರಂಭಿಸಲು ಕಂಪೆನಿಗಳು ಜಮೀನು ಗುರುತಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭ ಆಗಬೇಕಾಗಿದೆ. ಯಾದಗಿರಿ ಹೊರವಲಯದಲ್ಲಿ ಸುಮಾರು ಒಂದು ಸಾವಿರ ಎಕರೆ ಹಾಗೂ ಸುರಪುರ ಬಳಿ 200 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಯಾದಗಿರಿಯ ಹೊರವಲಯದಲ್ಲಿ ಹತ್ತಿ ಮಾರುಕಟ್ಟೆ, ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಸುರಪುರ ಬಳಿ ಜವಳಿ ಪಾರ್ಕ್ ಆರಂಭಿಸಲು ನಿರ್ಧರಿಸಿದೆ. ಶಹಾಪುರ ತಾಲ್ಲೂಕಿನ ವಡಗೇರಾ ಬಳಿ ಕೋರ್‌ಗ್ರೀನ್ ಕಂಪೆನಿಯ ಸಕ್ಕರೆ ಕಾರ್ಖಾನೆ ಆರಂಭವಾಗಿದ್ದು, ಇನ್ನೊಂದು ಸಕ್ಕರೆ ಕಾರ್ಖಾನೆ ಆರಂಭಿಸುವ ಪ್ರಸ್ತಾಪ ಜಿಲ್ಲಾಡಳಿತದ ಮುಂದಿದೆ.

ಹತ್ತಿ ಮಾರುಕಟ್ಟೆ ಸ್ಥಾಪಿಸಿ: ಯಾದಗಿರಿಯಲ್ಲಿ ಹತ್ತಿ ಮಾರುಕಟ್ಟೆ ಸ್ಥಾಪನೆ, ಸುರಪುರದಲ್ಲಿ ಜವಳಿ ಪಾರ್ಕ್, ಸುಮಾರು 100 ಎಕರೆ ಪ್ರದೇಶದಲ್ಲಿ ಶಹಾಪುರದಲ್ಲಿ ಫುಡ್ ಪಾರ್ಕ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಗ್ರಹ.

ಜಿಲ್ಲೆಯಲ್ಲಿ ಸಾಕಷ್ಟು ಹತ್ತಿ ಬೆಳೆಯಲಾಗುತ್ತಿದ್ದು, ಹತ್ತಿ ಮಾರುಕಟ್ಟೆ ಒದಗಿಸಿದಲ್ಲಿ, ಜವಳಿ ಉದ್ಯಮಕ್ಕೆ ಅನುಕೂಲ ಆಗಲಿದೆ ಎನ್ನುತ್ತಾರೆ ಸಂಸ್ಥೆ ಅಧ್ಯಕ್ಷ ವಿಶ್ವನಾಥ ಆವಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.