ADVERTISEMENT

ಹೋಂ ಸ್ಟೇಗಳಾದ ಐನ್‌ಮನೆಗಳು: ವಿಷಾದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ಭಾರತೀಸುತ ವೇದಿಕೆ (ಮಡಿಕೇರಿ): ‘ದುಡ್ಡಿದ್ದವರು ಇಲ್ಲಿನ ಕಾಫಿ ತೋಟ, ಕಾಡು ಕಡಿದು ರೆಸಾರ್ಟ್‌, ಹೋಂ ಸ್ಟೇ ನಿರ್ಮಿಸುತ್ತಿದ್ದಾರೆ. ಇಲ್ಲಿನ ಕೆಲವು ರೆಸಾರ್ಟ್‌ಗಳಲ್ಲಿ ಸ್ಥಳೀಯರಿಗೆ ಪ್ರವೇಶ ನೀಡುತ್ತಿಲ್ಲ. ಕೊಡಗಿನ ಪಾರಂಪರಿಕ ಐನ್‌ ಮನೆಗಳ ಕೆಲವು ಭಾಗಗಳನ್ನು ರೆಸಾರ್ಟ್‌­ಗಳನ್ನಾಗಿ ಪರಿವರ್ತಿಸ­ಲಾಗುತ್ತಿದೆ’ ಎಂದು ಬರಹಗಾರ ಐತಿಚಂಡ ರಮೇಶ್‌ ಉತ್ತಪ್ಪ ಆತಂಕ ವ್ಯಕ್ತಪಡಿಸಿದರು.

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನವಾದ ಮಂಗಳವಾರ ನಡೆದ ‘ಕೊಡಗು ಜಿಲ್ಲೆಯ ಮುಂದಿರುವ ಸವಾಲುಗಳು’ ಗೋಷ್ಠಿಯಲ್ಲಿ ಮಾತನಾ­ಡಿದ ಅವರು, ‘ಸ್ಥಳೀಯರ ವಿರೋಧ ಇದ್ದರೂ ಇಲ್ಲಿನ ಕಾಡು ಕಡಿದು ಹೈಟೆನ್ಷನ್‌ ವಿದ್ಯುತ್‌ ತಂತಿಗಳನ್ನು ಎಳೆಯಲಾಗುತ್ತಿದೆ. ಬಂಡವಾಳ­ಶಾಹಿ­ಗಳು ಇಲ್ಲಿನ ಸಂಪತ್ತು ಕೊಳ್ಳೆ ಹೊಡೆಯಲು ಹೊಂಚು ಹಾಕಿದ್ದಾರೆ. ನಾಡಿನ ಐನ್‌ ಮನೆಗಳು ಆಪತ್ತಿನಲ್ಲಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

2013ರಲ್ಲಿ ಕೊಡಗು ಜಿಲ್ಲೆಗೆ 30 ಲಕ್ಷ ಪ್ರವಾಸಿಗರು ಬಂದಿದ್ದರು ಎಂದು ಅಂದಾಜಿಸ­ಲಾಗಿದೆ. ಆದರೆ, ಇಲ್ಲಿಗೆ ಬಂದವರಲ್ಲಿ ಹಲವರು, ಮದ್ಯಪಾನ ಮಾಡಿ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡಿದ ನಿದರ್ಶನ ಇದೆ. ಅಂಥ ಚಟುವಟಿಕೆ­ಗಳನ್ನು ತಡೆಯಲು ಮುಂದಾದ ಸ್ಥಳೀಯರ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆಗಳೂ ನಡೆದಿವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಸ್ಥಳೀಯರ, ಕನ್ನಡಿಗರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಪ್ರವಾಸೋದ್ಯಮಕ್ಕೆ ಕೊಡಗಿನಲ್ಲಿ ತುಸು ನಿಯಂತ್ರಣ ಬೇಕು ಎಂದು ಅವರು ಒತ್ತಾಯಿಸಿದರು.

ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ‘ಕೊಡಗಿಗೆ ತನ್ನದೇ ಆದ ಸಾಹಿತ್ಯ, ಸಂಸ್ಕೃತಿ ಪರಂಪರೆಯಿದೆ. ಆದರೆ ಇದನ್ನು ನಾವು ಮರೆತಿದ್ದೇವೆ. ಈ ಕುರಿತು ಮಾಧ್ಯಮ­ಗಳಲ್ಲಿ ಕೂಡ ಚರ್ಚೆಯಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇಂಗ್ಲಿಷ್‌ ಶಿಕ್ಷಣ ಇಲ್ಲಿನ ಕೆಲವೇ ವರ್ಗಗಳಿಗೆ ಮೀಸಲಾಯಿತು. ಇಂಗ್ಲಿಷ್‌ ಕಲಿತವರು ಹೊಸ ಉದ್ಯೋಗಗಳನ್ನು ಗಿಟ್ಟಿಸಿ ಮೇಲ್ವರ್ಗದವರಂತೆ (elitist) ಆದರು. ಅವರ ಧ್ವನಿ ಹೆಚ್ಚಿನ ಕಡೆ ಕೇಳಲಾರಂಭಿಸಿತು. ಆದರೆ, ಇನ್ನುಳಿ­ದವರ ಧ್ವನಿ ಮುನ್ನೆಲೆಗೆ ಬರಲಿಲ್ಲ. ವಸಹಾತುಶಾಹಿ ಪ್ರಭಾವದ ಕಾರಣ, ಬ್ರಿಟಿಷರು ಮಾಡಿದ್ದನ್ನೆಲ್ಲ ಅನುಕರಿಸ­ಲಾಯಿತು. ಈ ಸಂದರ್ಭದಲ್ಲಿ ದುರ್ಬಲ ವರ್ಗಗಳು ಪ್ರಾಮುಖ್ಯ ಪಡೆದುಕೊಳ್ಳ­ಲಿಲ್ಲ. ಕೊಡಗಿನಲ್ಲಿ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಒಟ್ಟು ಜನಸಂಖ್ಯೆ­ಯ ಶೇಕಡ 30ಕ್ಕಿಂತ ಹೆಚ್ಚು. ಆದರೆ ಅವರ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂದು ವಿಶ್ಲೇಷಿಸಿದರು.

ಮತಾಂತರ: ಇಲ್ಲಿನ ಗಿರಿಜನರು ಸಮಾನತೆ­ಯನ್ನು ಹುಡುಕಿಕೊಂಡು ಮತಾಂತರ ಆಗುತ್ತಿ­ದ್ದಾರೆ. ಆದರೆ ಅವರು ಸಮಾನತೆಯನ್ನು ಪಡೆಯಬಾರದು ಎನ್ನುವವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಉಪ­ನ್ಯಾಸಕ ಡಾ.ಜೆ. ಸೋಮಣ್ಣ ಹೇಳಿದರು.

ಕಾಡಿನಲ್ಲಿ ಬದುಕು ಕಂಡುಕೊಂಡಿ­ರುವ ಗಿರಿಜನರನ್ನು, ಪುನರ್ವಸತಿಯ ಹೆಸರಿನಲ್ಲಿ ಬಯಲು ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿ­ದ್ದಾರೆ. ಅರಣ್ಯ ಇಲಾಖೆಯಿಂದ ಕೂಡ ಅವರು ಕಿರುಕುಳ ಎದುರಿಸುತ್ತಿದ್ದಾರೆ. ಸರ್ಕಾರದ ಯಾವ ಮೂಲಸೌಕರ್ಯ ಯೋಜನೆಯೂ ಗಿರಿಜನರನ್ನು ತಲುಪುತ್ತಿಲ್ಲ ಎಂದು ಅವರು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೆ.ಇ. ರಾಧಾಕೃಷ್ಣ ಅವರು, ‘ಮೂಲ ಸಂಸ್ಕೃತಿಯ ಬೇರುಗಳನ್ನು ಗಟ್ಟಿಯಾಗಿಟ್ಟುಕೊಂಡು, ಹೊರಗಿನ ಸಂಸ್ಕೃತಿಯ ಜೊತೆ ಸಂವಾದ ನಡೆಸು­ವುದು ಇಂದಿನ ಸವಾಲು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.