ಬೆಂಗಳೂರು: ‘ಹಳೆಯ ತಲೆಮಾರಿನ ಲೇಖಕರ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡಾಗಲೇ ವರ್ತಮಾನವನ್ನು ಹೆಚ್ಚು ಆಪ್ತವಾಗಿ ನೋಡಲು ಸಾಧ್ಯ’ ಎಂದು ಕತೆಗಾರ ಕೆ. ಸತ್ಯನಾರಾಯಣ ತಿಳಿಸಿದರು. ಆರ್.ವಿ.ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಕನ್ನಡ ಸಾಹಿತ್ಯ ದಿಗ್ಗಜರು’ (ವ್ಯಕ್ತಿ ಚಿತ್ರಗಳು) ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಇತಿಹಾಸ ಅರಿಯದೇ, ವರ್ತಮಾನವನ್ನು ಕಟ್ಟಿಕೊಳ್ಳುವುದು ಕಷ್ಟ. ಯುವ ಸಾಹಿತಿಗಳು ಹಿರಿಯ ತಲೆಮಾರಿನ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು. ‘ಎಲ್ಲ ಕ್ಷೇತ್ರಗಳು ತಮ್ಮದೇ ಆದ ಚರಿತ್ರೆಯನ್ನು ಸೃಷ್ಟಿಸಿಕೊಂಡಿರುತ್ತವೆ. ಚರಿತ್ರೆಯಲ್ಲಿ ಛಾಪು ಮೂಡಿಸಿದ ಬರಹಗಾರರು ಮತ್ತು ಅವರ ದೃಷ್ಟಿಕೋನವನ್ನು ಅರಿತಾಗ ರಚನಾತ್ಮಕ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ಈ ಪುಸ್ತಕವು ಮಂಜೇಶ್ವರ ಗೋವಿಂದ ಪೈ, ಹುಯಿಲಗೋಳ ನಾರಾಯಣರಾಯರು ಸೇರಿದಂತೆ ಹಲವು ಸಾಹಿತ್ಯ ದಿಗ್ಗಜರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಓದುಗರಿಗೆ ಸ್ಫೂರ್ತಿ ಒದಗಿಸುವುದರೊಂದಿಗೆ, ಆ ಕಾಲಘಟ್ಟದ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ’ ಎಂದು ಹೇಳಿದರು.
ಲೇಖಕ ಪ್ರೊ.ಜಿ.ಅಶ್ವತ್ಥನಾರಾಯಣ, ‘ಹಳೆಯ ತಲೆಮಾರಿನ ಲೇಖಕರ ವ್ಯಕ್ತಿತ್ವದ ಬಗ್ಗೆ ಮಾಹಿತಿ ಸಂಗ್ರಹಿಸಿ ಓದುಗರ ಮುಂದಿಟಿದ್ದೇನೆ. ಇದು ಒಂದು ಬಗೆಯ ಮಾಹಿತಿ ಗ್ರಂಥ’ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಜಂಟಿ ಕಾರ್ಯದರ್ಶಿ ಡಿ.ಪಿ.ನಾಗರಾಜ್, ‘ಹಿರಿಯ ಲೇಖಕರ ವ್ಯಕ್ತಿಚಿತ್ರದ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಅಪರೂಪದ ವ್ಯಕ್ತಿಗಳ ಬಗ್ಗೆಯೂ ಪುಸ್ತಕ ಮಾಲಿಕೆ ಬರಲಿ’ ಎಂದು ಆಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.