ADVERTISEMENT

ಮೊದಲ ಕಂತಿನಲ್ಲಿ ₹50 ಸಾವಿರ ಸಾಲ ಮನ್ನಾ: ಎಚ್‌ ಡಿ ಕುಮಾರಸ್ವಾಮಿ

ಜನವರಿಯಲ್ಲಿ 10 ಲಕ್ಷ ರೈತರಿಗೆ ಋಣಮುಕ್ತ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 17:42 IST
Last Updated 4 ಡಿಸೆಂಬರ್ 2018, 17:42 IST

ಬೆಂಗಳೂರು: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ 21 ಲಕ್ಷ ರೈತರ ಮಾಹಿತಿ ಸಂಗ್ರಹಿಸಿದ್ದೇವೆ. 17 ಲಕ್ಷ ಜನರಲ್ಲಿ ₹50 ಸಾವಿರದಷ್ಟು ಸಾಲ ಪಡೆದವರೇ ಜಾಸ್ತಿ ಇದ್ದಾರೆ. ಅವರ ಸಾಲ ಮನ್ನಾಕ್ಕೆ ಕೆಲವೇ ದಿನಗಳಲ್ಲಿ ಮೊದಲ ಕಂತಿನ ಹಣ ಬಿಡುಗಡೆ ಮಾಡಲಿದ್ದೇವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

‘ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿದ್ದು, ದತ್ತಾಂಶ ಸಂಗ್ರಹಿಸಲಾಗಿದೆ. ಇದೇ 8ರಂದು ಜಿಲ್ಲಾ ಉಸ್ತುವಾರಿ ಸಚಿವರು ಋಣ ಮುಕ್ತ ಪ್ರಮಾಣಪತ್ರ ನೀಡಲಿದ್ದಾರೆ. ಜನವರಿಯಲ್ಲಿ 10 ಲಕ್ಷ ಜನರನ್ನು ಒಟ್ಟಿಗೆ ಸೇರಿಸಿ ಋಣಮುಕ್ತ ಪ್ರಮಾಣಪತ್ರ ನೀಡಲಾಗುತ್ತದೆ’ ಎಂದು ಹೇಳಿದರು.

‘2.20 ಲಕ್ಷ ಸಾಲದ ಖಾತೆಗಳು ವಸೂಲಾಗದ ಸಾಲಗಳ (ಎನ್‌ಪಿಎ) ಪಟ್ಟಿಯಲ್ಲಿ ಇವೆ. ಒಂದೇ ಕಂತಿನಲ್ಲಿ ಸಾಲ ತುಂಬಿದರೆ ಶೇ 50ರಷ್ಟು ವಿನಾಯಿತಿ ನೀಡಲಾಗುತ್ತದೆ ಎಂದು ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಸಾಲಗಾರರಿಗೆ ಭರವಸೆ ನೀಡಿದ್ದವು. ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿದ ಬಳಿಕ ಮೌನ ತಾಳಿದವು. ಈ ವಿನಾಯಿತಿಯನ್ನು ರಾಜ್ಯ ಸರ್ಕಾರಕ್ಕೂ ನೀಡಿ ಎಂದು ಕೋರಿದ್ದೇವೆ. ಈ ಸಂಬಂಧ ಚರ್ಚೆ ಸಾಗಿದೆ. ರಾಜ್ಯ ಸರ್ಕಾರ ನಯಾ‍ಪೈಸೆ ಸಾಲ ಮನ್ನಾ ಮಾಡಿಲ್ಲ ಎಂದು ಹೇಳುತ್ತಿರುವ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ‍ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಹೋಗಿ ಒತ್ತಡ ಹೇರಲಿ’ ಎಂದು ಸವಾಲು ಎಸೆದರು.

ADVERTISEMENT

**

ಆನೆ ಹಾವಳಿ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹೋಗಿ ಆನೆ ಓಡಿಸಬೇಕೇ?
- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.