ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ಕಾರಣದಿಂದ ಬಾಗಿಲು ಮುಚ್ಚಿದ್ದ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ 1ರಿಂದ 5ರವರೆಗಿನ ತರಗತಿಗಳು ಸೋಮವಾರದಿಂದ(ಅ. 25) ಮತ್ತೆ ತೆರೆಯುತ್ತಿವೆ.
ಒಂದೂವರೆ ವರ್ಷದ ಬಳಿಕ ಶಾಲೆಗಳತ್ತ ಹೆಜ್ಜೆ ಹಾಕಲಿರುವ ಚಿಣ್ಣರನ್ನು ಸ್ವಾಗತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಸಿದ್ದತೆಗಳನ್ನೂ ಮಾಡಿಕೊಂಡಿದೆ. ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ತಳಿರು ತೋರಣ ಕಟ್ಟಿ, ಸ್ವಾಗತ ಕಮಾನುಗಳನ್ನು ಅಳವಡಿಸಿ ಶಾಲೆಗಳನ್ನು ಸಿಂಗರಿಸಿ, ಸಜ್ಜುಗೊಳಿಸಿದೆ.
ಮೊದಲ ವಾರ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಅರ್ಧ ದಿನ ಮಾತ್ರ ತರಗತಿಗಳು ನಡೆಯಲಿವೆ. ಹೀಗಾಗಿ, ಈ ದಿನಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ. ನ.2 ರಿಂದ ಪೂರ್ಣ ಅವಧಿ (ಬೆಳಿಗ್ಗೆ 10ರಿಂದ ಸಂಜೆ 4.30) ಶಾಲೆ ನಡೆಯಲಿದ್ದು, ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆಯೂ ಇರಲಿದೆ. ಶನಿವಾರ ಬೆಳಿಗ್ಗೆ 8 ರಿಂದ 11.40 ರವರೆಗೆ ತರಗತಿಗಳು ನಡೆಯಲಿವೆ.
ತರಗತಿಯ ಕೊಠಡಿಯೊಂದರಲ್ಲಿ ಗರಿಷ್ಠ 20 ವಿದ್ಯಾರ್ಥಿಗಳು ಕುಳಿತುಕೊಳ್ಳಲು ಅಥವಾ ಒಟ್ಟು ಹಾಜರಾಗುವ ಮಕ್ಕಳಲ್ಲಿ ಶೇ 50 ರಷ್ಟು ಮಕ್ಕಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಒಂದೂವರೆ ವರ್ಷದಿಂದ ಭೌತಿಕ ತರಗತಿಗಳು ನಡೆಯದೇ ಇರುವುದರಿಂದ, ‘ಸೇತುಬಂಧ’ (ಬ್ರಿಡ್ಜ್ ಕೋರ್ಸ್) ಶಿಕ್ಷಣದ ಮೂಲಕ ಬೋಧನಾ ಪದ್ಧತಿ ಆರಂಭಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿನ ಕಲಿಕೆಗೆ ಶಾಲೆಗಳು ಮಕ್ಕಳನ್ನು ಅಣಿಗೊಳಿಸಲಿದೆ. ಆದರೆ, ಯಾವುದೇ ಶಾಲೆಯಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತೆರೆಯಲು ಅವಕಾಶ ಇಲ್ಲ.
ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು. ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದ ಶಿಕ್ಷಕರು ಮಾತ್ರ ಬೋಧನೆ ಮಾಡಬೇಕು.
ಮಾರ್ಗಸೂಚಿಯಲ್ಲಿ ಏನಿದೆ?
* ಶೇ 50ರಷ್ಟು ಹಾಜರಾತಿಯಲ್ಲಿ ತರಗತಿ
* ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ
* ಅನುಮತಿ ಪತ್ರದಲ್ಲಿ ವಿದ್ಯಾರ್ಥಿಯ ಕೋವಿಡ್ ಸೋಂಕು ಇಲ್ಲದೆ ಇರುವುದನ್ನು ದೃಢೀಕರಿಸಬೇಕು
* ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
* ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ
* ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ತರಗತಿಗೂ ಅವಕಾಶ
* 15ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ
* ಕೋವಿಡ್ ಲಸಿಕೆ ಎರಡು ಡೋಸ್ ಪಡೆದ ಶಿಕ್ಷಕರಿಂದ ಮಾತ್ರ ಬೋಧನೆ
* 50 ವರ್ಷ ದಾಟಿದ ಶಿಕ್ಷಕರು ಫೇಸ್ ಶೀಲ್ಡ್ ಧರಿಸುವುದು ಕಡ್ಡಾಯ
‘ಕಪ್ಪುಪಟ್ಟಿ ಧರಿಸಿ ಪಾಠ’
ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಮಕ್ಕಳ ಪಾಠಗಳಿಗೆ ತೊಂದರೆ ಆಗದಂತೆ ಕಪ್ಪುಪಟ್ಟಿ ಧರಿಸಿ ಅಸಹಕಾರ ಚಳವಳಿ ಮುಂದುವರಿಸಲು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿರ್ಧರಿಸಿದೆ.
‘ಬೇಡಿಕೆ ಈಡೇರಿಸದಿದ್ದರೆ ಅನಿವಾರ್ಯವಾಗಿ ಉಗ್ರರೂಪದ ಹೋರಾಟ ಹಮ್ಮಿಕೊಳ್ಳುತ್ತೇವೆ. ನಾವು ಬೀದಿಗಿಳಿಯುವ ಮೊದಲೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಲ್ಲ 35 ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೋಮವಾರ (ಅ. 25) ಮನವಿ ಸಲ್ಲಿಸಲಾಗುವುದು‘ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.