ADVERTISEMENT

ವಿಶೇಷ ಕಾರ್ಯಾಚರಣೆ | ₹100 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

500ಕ್ಕೂ ಹೆಚ್ಚು ಪ್ರಕರಣ ದಾಖಲು

ಕೆ.ಎಸ್.ಸುನಿಲ್
Published 2 ಜನವರಿ 2025, 23:30 IST
Last Updated 2 ಜನವರಿ 2025, 23:30 IST
ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ. 
ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ.    

ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಕಳೆದ ವರ್ಷ (2024) ಬರೋಬ್ಬರಿ ₹100 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ 550 ಪ್ರಕರಣಗಳನ್ನು ದಾಖಲಿಸಿ 2,662 ಕೆ.ಜಿ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, 742 ದಂಧೆಕೋರರನ್ನು ಬಂಧಿಸಿದ್ದಾರೆ. ಪೊಲೀಸರು ಕೈಗೊಂಡ ವಿಶೇಷ ಕಾರ್ಯಾಚರಣೆಗಳ ಫಲವಾಗಿ 2024ರಲ್ಲಿ ಡ್ರಗ್ಸ್ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ.

2023ರಲ್ಲಿ 3,433 ಪ್ರಕರಣಗಳನ್ನು ದಾಖಲಿಸಿ 4,399 ಮಂದಿಯನ್ನು ಬಂಧಿಸಿ, ಸುಮಾರು ₹103 ಕೋಟಿ ಮೌಲ್ಯದ 5,387 ಕೆ.ಜಿ ಮಾದಕ ವಸ್ತು ವಶಕ್ಕೆ ಪಡೆದಿದ್ದರು. 2024ರಲ್ಲಿ ಗಾಂಜಾ, ಬ್ರೌನ್ ಶುಗರ್, ಅಫೀಮು, ಹೆರಾಯಿನ್ ಜೊತೆ ಸಿಂಥೆಟಿಕ್ ಡ್ರಗ್ಸ್ ಮಾರಾಟ ಪ್ರಮಾಣ ತುಸು ಇಳಿಕೆಯಾಗಿದೆ.

ADVERTISEMENT

ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದವರನ್ನು ಬಂಧಿಸಲಾಗುತ್ತಿದೆ. ಡ್ರಗ್ಸ್ ಖರೀದಿಸಿ ಸೇವಿಸುತ್ತಿದ್ದವರನ್ನು ಬಂಧಿಸದ ಕಾರಣ ಬಂಧಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆಡ್‌ಶೀಟ್ ಕವರ್, ಸೋಪ್ ಬಾಕ್ಸ್, ಚಾಕೋಲೆಟ್ ಬಾಕ್ಸ್‌, ಲಗೇಜ್ ಬ್ಯಾಗ್‌ಗಳಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಅಡಗಿಸಿ ರೈಲು ಮತ್ತು ಬಸ್‌ಗಳ ಮೂಲಕ ಪ್ರಯಾಣಿಕರ ಸೋಗಿನಲ್ಲಿ ನಗರಕ್ಕೆ ತರಲಾಗುತ್ತಿದೆ. ಗೌಪ್ಯವಾದ ಸ್ಥಳದಲ್ಲಿ ಅವುಗಳನ್ನು ಇರಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಇಂತಹವರ ಕಾರ್ಯಚಟುವಟಿಕೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಗಾಂಜಾ, ಕೊಕೇನ್, ಎಂಡಿಎಂಎ ಮಾತ್ರೆ, ಎಕ್ಸ್‌ಟೆಸಿ ಟ್ಯಾಬ್ಲೆಟ್‌, ಸಿಂಥೆಟಿಕ್ ಡ್ರಗ್ಸ್, ಅಫೀಮು, ಬ್ರೌನ್ ಶುಗರ್ ಮತ್ತಿತರ ನಶೆ ಬರಿಸುವ ಮಾದಕವಸ್ತುಗಳನ್ನು ವಿದೇಶಿ ಪ್ರಜೆಗಳು ಮತ್ತು ಸ್ಥಳೀಯ ಡ್ರಗ್ಸ್‌ ಪೆಡ್ಲರ್‌ಗಳು ಸಂಗ್ರಹಿಸಿ ಮಾರಾಟ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್‌ ತರಿಸಿಕೊಂಡು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತುಂಬಿ ಹೆಚ್ಚಿನ ಬೆಲೆಗೆ ಪೆಡ್ಲರ್‌ಗಳು ಮಾರಾಟ ಮಾಡುತ್ತಾರೆ. ತ್ರಿಪುರಾ, ಬಿಹಾರ, ಆಂಧ್ರಪ್ರದೇಶ, ಒಡಿಶಾ ಗಡಿ ಭಾಗಗಳಲ್ಲಿ ಬೆಳೆದ ಗಾಂಜಾವನ್ನು ರೈಲು ಬಸ್‌ಗಳ ಮೂಲಕ ಪೊಲೀಸರ ಕಣ್ತಪ್ಪಿಸಿ ತರುತ್ತಿದ್ದಾರೆ. ನಗರದಲ್ಲಿ ಸಣ್ಣಪುಟ್ಟ ಸಿಗರೇಟ್‌ ಅಂಗಡಿಗಳಲ್ಲಿ ಕದ್ದುಮುಚ್ಚಿ ಮಾದಕವಸ್ತು ಮಾರಾಟ ಮಾಡಲಾಗುತ್ತಿದೆ. ಮಾದಕವಸ್ತು ಮಾರಾಟಗಾರರ ಮೇಲೆ ಆಗಾಗ್ಗೆ ದಾಳಿ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದರು.

‘ಮಾದಕವಸ್ತು ಮಾರಾಟ ಜಾಲ ಪ್ರಕರಣದಲ್ಲಿ ಬಂಧಿತರಿಂದ ಹೆಚ್ಚಾಗಿ ಎಂಡಿಎಂಎ, ಗಾಂಜಾ, ಸಿಂಥೆಟಿಕ್ ಡ್ರಗ್ಸ್  ವಶಕ್ಕೆ ಪಡೆದುಕೊಳ್ಳಲಾಗಿದೆ. ಅಧಿಕ ಬೆಲೆಯ ಸಿಂಥೆಟಿಕ್ ಡ್ರಗ್ಸ್​ ದೆಹಲಿ ಹಾಗೂ ಮುಂಬೈನಿಂದ ನಗರಕ್ಕೆ ಬರುತ್ತಿದ್ದು, ಐಟಿ, ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡಲಾಗುತ್ತಿದೆ. ನಿರಂತರ ಜಾಗೃತಿ ಹಾಗೂ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಕೈಗೊಂಡ ಪರಿಣಾಮ ಕೊಂಚ ತಹಬದಿಗೆ ತರಲಾಗಿದೆ’ ಎಂದು ತಿಳಿಸಿದರು.

‘ಮಾದಕವಸ್ತು ಪೂರೈಕೆ ಮತ್ತು ಮಾರಾಟ ಜಾಲದಲ್ಲಿ ಸ್ಥಳೀಯ ಪೆಡ್ಲರ್ ಹಾಗೂ ವಿದೇಶಿ ಪೆಡ್ಲರ್‌ಗಳು ಭಾಗಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿದೇಶಿ ಮಹಿಳೆಯನ್ನು ಬಂಧಿಸಿ ₹24 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಫ್ರಿಕಾ ಮೂಲದವರು ಬಹುತೇಕ ಈ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಮಾದಕ ವಸ್ತು

ವಿದ್ಯಾರ್ಥಿಗಳಿಗೆ ಅರಿವು

ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದ ಭಾಗವಾಗಿ ನಗರ ವ್ಯಾಪ್ತಿಯಲ್ಲಿ 500 ಶಾಲಾ–ಕಾಲೇಜು 320 ಹಾಸ್ಟೆಲ್‌ಗಳಿಗೆ ಭೇಟಿ ನೀಡಿ 63188 ಸಾವಿರ ವಿದ್ಯಾರ್ಥಿಗಳಿಗೆ ಪೊಲೀಸ್ ಅಧಿಕಾರಿಗಳು ಅರಿವು ಮೂಡಿಸಿದ್ದಾರೆ.

ವಿದೇಶಿಯರ ಅಕ್ರಮ ವಾಸ

ನಗರದಲ್ಲಿ ವಿವಿಧೆಡೆ ವಾಸಿಸುತ್ತಿರುವ 411 ಮಂದಿ ವಿದೇಶಿ ಪ್ರಜೆಗಳ ವಾಸ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ ವಿವರ ಪಡೆದುಕೊಂಡಿದ್ದಾರೆ. ಈ ಪೈಕಿ 29 ಮಂದಿ ವಿದೇಶಿಯರು ವೀಸಾ ಅವಧಿ ಮುಕ್ತಾಯಗೊಂಡ ಬಳಿಕವೂ ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಗೊತ್ತಾಗಿದೆ. ಹಾಗಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ)ಗೆ ಹಾಜರುಪಡಿಸಿ ಅವರ ಗಡೀಪಾರಿಗೆ ಕ್ರಮ ವಹಿಸಲು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
-ಬಿ.ದಯಾನಂದ್, ನಗರ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.