ADVERTISEMENT

ಐದು ವರ್ಷಗಳಲ್ಲಿ 11 ಗಿಗಾ ವ್ಯಾಟ್‌ ಹಸಿರು ವಿದ್ಯುತ್‌ ಉತ್ಪಾದನೆ: ಇಂಧನ ಸಚಿವ

​ಪ್ರಜಾವಾಣಿ ವಾರ್ತೆ
Published 19 ಮೇ 2022, 11:12 IST
Last Updated 19 ಮೇ 2022, 11:12 IST
ಇಂಧನ ಸಚಿವ ವಿ.ಸುನಿಲ್‌ ಕುಮಾರ್‌
ಇಂಧನ ಸಚಿವ ವಿ.ಸುನಿಲ್‌ ಕುಮಾರ್‌   

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 11 ಗಿಗಾ ವ್ಯಾಟ್‌ಗಳಷ್ಟು ಹಸಿರು ವಿದ್ಯುತ್‌ (ಸೌರ, ಜಲ ಮತ್ತು ಪವನ ಮೂಲಗಳಿಂದ) ಉತ್ಪಾದನೆ ಗುರಿ ಹೊಂದಲಾಗಿದ್ದು, ಇದಕ್ಕಾಗಿ ರಾಜ್ಯದ ಎಂಟು ಕಡೆಗಳಲ್ಲಿ ಹೈಬ್ರಿಡ್‌ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹಸಿರು ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ತುಮಕೂರು, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಗದಗ, ಬಾಗಲಕೋಟೆ, ಹಾವೇರಿ, ವಿಜಯಪುರದಲ್ಲಿ ಪವನ ವಿದ್ಯುತ್‌ ಘಟಕಗಳನ್ನು ಅಳವಡಿಸಲಾಗುತ್ತಿದೆ. ರಾಜ್ಯದಲ್ಲಿ ಸೌರ, ಪವನ ವಿದ್ಯುತ್‌ ಸಂಗ್ರಹಿಸುವ ಹೈಬ್ರಿಡ್‌ ಪಾರ್ಕ್ ಸ್ಥಾಪನೆಯ ಬಗ್ಗೆ ಗಮನಹರಿಸಿದ್ದೇವೆ. ಪಾವಗಡದಲ್ಲಿ 50 ಮೆಗಾವ್ಯಾಟ್‌ ಸ್ಟೋರೇಜ್‌ ಕ್ರೆಡೆಲ್‌ ಮಾಡುತ್ತಿದ್ದು, ಅದನ್ನು 500 ಮೆಗಾ ವ್ಯಾಟ್‌ವರೆಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಮಾರ್ಚ್‌ ತಿಂಗಳಲ್ಲಿ ಅತಿ ಹೆಚ್ಚು 14 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆ ಬಂದಿತ್ತು. ಯಾವುದೇ ಸಮಸ್ಯೆ ಆಗದಂತೆ ನಿರ್ವಹಣೆ ಮಾಡಲಾಗಿದೆ. ಆರು ವರ್ಷದ ಬಳಿಕ ಎಲ್ಲಾ ಥರ್ಮಲ್‌ ಯುನಿಟ್‌ಗಳು ಕೆಲಸ ಮಾಡುತ್ತಿವೆ. ಕಲ್ಲಿದ್ದಿಲಿನ ಸಮಸ್ಯೆ ಆಗದಂತೆ ಕೇಂದ್ರ ಸರ್ಕಾರದ ಜತೆ ಸಂಪರ್ಕ ಇಟ್ಟುಕೊಂಡಿದ್ದೇವೆ. ರಾಜ್ಯದಲ್ಲಿ ಮಳೆ ಆಗುತ್ತಿರುವುದರಿಂದ ಐಪಿ ಸೆಟ್‌ಗಳ ಒತ್ತಡವೂ ಕಡಿಮೆ ಆಗಿದೆ ಎಂದು ಸುನಿಲ್‌ ತಿಳಿಸಿದರು.

ನಮಗೆ ಕಲ್ಲಿದ್ದಿಲಿನ ಕೊರತೆ ಆಗಿಲ್ಲ. ಸರಬರಾಜಿನಲ್ಲಿ ವ್ಯತ್ಯಾಸ ಆಗಿರಬಹುದು. ಸದ್ಯಕ್ಕೆ ಮೂರರಿಂದ ನಾಲ್ಕು ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಸಂಗ್ರಹ ಇದೆ ಎಂದು ವಿವರಿಸಿದರು.

ಟ್ರಾನ್ಸ್‌ಫಾರ್ಮರ್‌ ನಿರ್ವಹಣಾ ಅಭಿಯಾನದಲ್ಲಿ ಈವರೆಗೆ 1,80,000 ಟ್ರಾನ್ಸ್‌ಫಾರ್ಮರ್‌ಗಳನ್ನು ನಿರ್ವಹಣೆ ಮಾಡಲಾಗಿದೆ ಎಂದರು.

ಸೌರ ಘಟಕ ಏಕಪಕ್ಷೀಯ ಹಂಚಿಕೆ
ಈ ಹಿಂದೆ ಸೌರ ವಿದ್ಯುತ್‌ ಘಟಕಗಳನ್ನು ಏಕಪಕ್ಷೀಯವಾಗಿ ಹಂಚಿಕೆ ಮಾಡಿರುವ ಆರೋಪ ಇದೆ. ಅದಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಂದಿಬ್ಬರಿಗೆ ಸಹಾಯ ಮಾಡಲು ಈ ಕೆಲಸ ಮಾಡಲಾಗಿದೆ. ಯಾರು ಈ ರೀತಿ ಮಾಡಿದ್ದಾರೆ ಎಂಬುದನ್ನು ದಾಖಲೆ ಬಿಡುಗಡೆ ಮಾಡುತ್ತೇನೆ. ಸದ್ಯಕ್ಕೆ ಯಾವುದೇ ತನಿಖೆ ಮಾಡಿಸುತ್ತಿಲ್ಲ ಎಂದು ಸುನಿಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.