ADVERTISEMENT

ಭಾವೈಕ್ಯತೆ ಮೆರೆದ ಮುಸ್ಲಿಂ ಕುಟುಂಬ: ಮಗಳ ಮದುವೆಯಲ್ಲಿ 11 ಹಿಂದೂ ಜೋಡಿಗಳ ವಿವಾಹ

ಪುತ್ರಿಯ ಇಚ್ಛೆ ಈಡೇರಿಸಿದ ಮುಸ್ಲಿಂ ಮುಖ್ಯಶಿಕ್ಷಕ

​ಪ್ರಜಾವಾಣಿ ವಾರ್ತೆ
Published 12 ಜುಲೈ 2018, 7:19 IST
Last Updated 12 ಜುಲೈ 2018, 7:19 IST
ಹಗರಿಬೊಮ್ಮನಹಳ್ಳಿಯಲ್ಲಿ ಶಿಕ್ಷಕ ಎಸ್‌. ಇನಾಯತ್‌ ಅವರು ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಜೋಡಿಗಳು ಅರುಂಧತಿ ನಕ್ಷತ್ರ ವೀಕ್ಷಣೆಯ ಸಂಭ್ರಮದಲ್ಲಿದ್ದರು. ಮಧ್ಯದಲ್ಲಿ ಇರುವವರು ಇನಾಯತ್‌ ಅವರ ಪುತ್ರಿ ಎಸ್‌ ನಗ್ಮಾ ಹಾಗೂ ಅಳಿಯ ಎಸ್‌.ಕೆ.ಎನ್.ರಸೂಲ್‌
ಹಗರಿಬೊಮ್ಮನಹಳ್ಳಿಯಲ್ಲಿ ಶಿಕ್ಷಕ ಎಸ್‌. ಇನಾಯತ್‌ ಅವರು ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಜೋಡಿಗಳು ಅರುಂಧತಿ ನಕ್ಷತ್ರ ವೀಕ್ಷಣೆಯ ಸಂಭ್ರಮದಲ್ಲಿದ್ದರು. ಮಧ್ಯದಲ್ಲಿ ಇರುವವರು ಇನಾಯತ್‌ ಅವರ ಪುತ್ರಿ ಎಸ್‌ ನಗ್ಮಾ ಹಾಗೂ ಅಳಿಯ ಎಸ್‌.ಕೆ.ಎನ್.ರಸೂಲ್‌   

ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ):ಮುಸ್ಲಿಂ ಸಮುದಾಯಕ್ಕೆ ಸೇರಿದ ಶಿಕ್ಷಕರೊಬ್ಬರು ತಮ್ಮ ಮಗಳ ಮದುವೆಯಲ್ಲಿ ಹಿಂದೂ ಧರ್ಮದ 11 ಜೋಡಿ ವಧು–ವರರ ಸಾಮೂಹಿಕ ವಿವಾಹ ನೆರವೇರಿಸಿ ಭಾವೈಕ್ಯ ಮೆರೆದಿದ್ದಾರೆ.

ತಾಲ್ಲೂಕಿನ ನಾರಾಯಣದೇವರಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಎಸ್‌.ಇನಾಯತ್‌, ಇಲ್ಲಿನ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿದ್ದರು. ಈ ಮೂಲಕ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿಯೇ ಮದುವೆಯಾಗುವುದಾಗಿ ಹೇಳಿದ್ದ ತಮ್ಮ ಮಗಳ ಬೇಡಿಕೆಯನ್ನೂ ಈಡೇರಿಸಿದರು.

ಇನಾಯತ್‌ ಅವರ ಪುತ್ರಿ ಎಸ್‌.ನಗ್ಮಾ ಎಂಜಿನಿಯರಿಂಗ್‌ ಪದವೀಧರೆ. ಮಗಳ ಒತ್ತಾಸೆಯಂತೆ ಹಿಂದೂ ಧರ್ಮದ ವಿವಿಧ ಸಮುದಾಯಗಳ 11 ಜೋಡಿಗಳ ವಿವಾಹ ನೆರವೇರಿಸಿ, ಅಂದಾಜು ₹ 5 ಲಕ್ಷ ವೆಚ್ಚವನ್ನು ಭರಿಸಿದರು. ಅಲ್ಲದೇ ನವದಂಪತಿಗೆ ತವರು ಮನೆಯ ಉಡುಗೊರೆಯಾಗಿ ಒಂದು ಗಾಡ್ರೇಜ್‌ ಮತ್ತು ಅಡುಗೆ ಪಾತ್ರೆಗಳನ್ನೂ ನೀಡಿದರು.

ADVERTISEMENT

ಪರಿಶಿಷ್ಟ ಜಾತಿಯ ಮೂರು, ಪರಿಶಿಷ್ಟ ಪಂಗಡದ ಎರಡು ಮತ್ತು ಇತರ ಜಾತಿಗೆ ಸೇರಿದ ಆರು ಜೋಡಿಗಳ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಲಾಯಿತು. ವಧು–ವರರನ್ನು ಹರಸಲು ಬಂದಿದ್ದ ಮೂರು ಸಾವಿರ ಜನರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ನವ ದಂಪತಿ ಎಸ್‌.ನಗ್ಮಾ ಮತ್ತು ಎಸ್‌.ಕೆ.ಎಸ್‌.ರಸೂಲ್‌ ಅವರಿಗೆ ಎಲ್ಲರೂ ಶುಭ ಹಾರೈಸಿದರು. ಮದುವೆ ಸಂಭ್ರಮದ ಬಳಿಕ ಇನಾಯತ್‌ ಮತ್ತು ಅವರ ಪತ್ನಿ ನಾಪೂನ್ನೀಸಾ ಅವರ ಮೊಗದಲ್ಲಿ ಮಂದಹಾಸ ಮೂಡಿತ್ತು. ವಿವಾಹಕ್ಕೆ ಬಂದವರು ಅಪ್ಪ ಮತ್ತು ಮಗಳ ಕಾರ್ಯವನ್ನು ಶ್ಲಾಘಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಕೆ.ನೀಲಾ, ವೀರಶೈವ ಲಿಂಗಾಯತ ಪಂಚಮಸಾಲಿ ಶಾಖಾ ಮಠದ ಮಹಾಂತ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಶಂಕರ ಸ್ವಾಮೀಜಿ, ಪಾದ್ರಿ ವಿಜಯಕುಮಾರ್‌, ಮೌಲಾನಾ ದಾದಾ ಸಾಹೇಬ್‌, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟಿ, ಶಿಕ್ಷಣ ಸಂಪನ್ಮೂಲ ಅಧಿಕಾರಿ ಬೋರಯ್ಯ ಈ ಸಮಾರಂಭಕ್ಕೆ ಸಾಕ್ಷಿಯಾದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ ಸೇರಿದಂತೆ ಇತರ ಕೆಲಸಗಳಲ್ಲಿ ಸಾಥ್ ನೀಡಿದರು.

***

‘ವಿಜೃಂಭಣೆ ಅರತಕ್ಷತೆ ಹಮ್ಮಿಕೊಂಡು ದುಂದು ವೆಚ್ಚ ಮಾಡುವ ಬದಲಾಗಿ ಬಡವರ 11ಜೋಡಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವಂತೆ ನಮ್ಮ ತಂದೆಯವರ ಬಳಿ ವಿನಂತಿಸಿಕೊಂಡಿದ್ದೆ. ನನ್ನ ಅಪೇಕ್ಷೆಯಂತೆ ಸಾಮೂಹಿಕ ವಿವಾಹವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ. ಇದು ತಮ್ಮ ಪತಿ ಎಸ್‌.ಕೆ.ಎನ್.ರಸೂಲ್‌ ಅವರಿಗೂ ತುಂಬಾ ಖುಷಿ ತಂದಿದೆ.’
ಎಸ್‌.ನಗ್ಮಾ , ಮುಖ್ಯ ಶಿಕ್ಷಕರ ಮಗಳು

***

‘ತಂದೆಯಾಗಿ ಮಗಳ ಆಸೆಯನ್ನು ಈಡೇರಿಸಿದ್ದೇನೆ. ಅವಳಿಗೆ ಇರುವ ಬಡವರ ಬಗೆಗಿನ ಅನುಕಂಪ ಮತ್ತು ಸಾಮಾಜಿಕ ಕಳಕಳಿ ನೋಡಿ ಹೆಮ್ಮೆ ಅನಿಸುತ್ತದೆ.’
ಎಸ್‌.ಇನಾಯತ್‌, ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.