ವಿಧಾನಸೌಧ
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ನಿಗದಿ ಮಾಡಿರುವ ಮೀಸಲಾತಿ ಪ್ರಮಾಣವನ್ನು ಶೇ 10ರಿಂದ ಶೇ 15ಕ್ಕೆ ಹೆಚ್ಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಈ ಮೀಸಲಾತಿಯು ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಪಾರ್ಸಿಗಳಿಗೂ ಅನ್ವಯವಾಗುತ್ತದೆ ಎಂದರು.
‘ಅಲ್ಪಸಂಖ್ಯಾತರಲ್ಲಿ ವಸತಿಹೀನರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಕೇಂದ್ರ ಸರ್ಕಾರವೂ ಇದನ್ನು ಗಮನಿಸಿ ಸೂಚನೆಯನ್ನು ನೀಡಿದೆ. ಸಾಚಾರ್ ಸಮಿತಿಯೂ ತನ್ನ ವರದಿಯಲ್ಲಿ ಈ ಅಂಶವನ್ನು ಗುರುತಿಸಿದೆ. ನಮ್ಮ ಸರ್ಕಾರವು ಈ ಸಮುದಾಯದ ವಸತಿರಹಿತರನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು ಮೀಸಲಾತಿ ಪ್ರಮಾಣ ಹೆಚ್ಚಿಸಲು ತೀರ್ಮಾನಿಸಿದೆ’ ಎಂದರು.
‘ಮೀಸಲಾತಿ ಹೆಚ್ಚಳಕ್ಕೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿಲ್ಲ. ಒಂದು ಆದೇಶವನ್ನು ಹೊರಡಿಸಿದರೆ ಸಾಕು. ಶೇ 15 ಮೀಸಲಾತಿಯಲ್ಲಿ ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧರಿಗೆ ಇಂತಿಷ್ಟು ಪ್ರಮಾಣ ಎಂದು ಪ್ರತ್ಯೇಕಿಸುವ ಪ್ರಶ್ನೆಯೇ ಇಲ್ಲ. ಈ ತೀರ್ಮಾನದಲ್ಲಿ ಯಾವುದೇ ರಾಜಕೀಯ ಇಲ್ಲ’ ಎಂದು ಪಾಟೀಲ ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ವಸತಿ ಇಲಾಖೆ ನಿರ್ಮಿಸುವ ವಸತಿಗಳಿಗೆ ಇತರೆ ಸಮುದಾಯದವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಬೆಂಗಳೂರಿನಲ್ಲೂ ಅನೇಕ ವಸತಿ ಸಮುಚ್ಚಯಗಳಲ್ಲಿ ಮನೆಗಳು ಖಾಲಿ ಇವೆ. ಈ ಮನೆಗಳಿಗೆ ಯಾರೂ ಅರ್ಜಿ ಹಾಕದೇ ಇದ್ದಾಗ ನಾವು ಏನು ಮಾಡಬೇಕು? ಮನೆಯನ್ನು ಹಾಗೇ ಖಾಲಿ ಬಿಡಬೇಕೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಸಂಪುಟ ಸಭೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರದ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಂಡರು.
‘ಕೆಲವು ನಗರ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಡವರ ಪ್ರಮಾಣ ಶೇ 20ರಿಂದ 30ರಷ್ಟಿದೆ. ಹೀಗಾಗಿ ಅವರಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲು ಪ್ರಸ್ತಾವನೆ ಬಂದಿದೆ. ಈ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸಹಾಯಧನ ತೀರಾ ಕಡಿಮೆ ಇದೆ. ಖಾಲಿ ಬಿದ್ದ ಮನೆಗಳನ್ನು ಯಾರಿಗೆ ನೀಡಬೇಕು’ ಎಂದು ಪ್ರಶ್ನಿಸಿದರು.
‘ಮಂಡ್ಯದಲ್ಲಿಯೂ ವಸತಿ ಸಮುಚ್ಚಯ ನಿರ್ಮಿಸಲಾಗಿದೆ. ಆದರೆ, ಅಲ್ಲಿಗೆ ಯಾರೂ ಹೋಗದೇ ಖಾಲಿ ಬಿದ್ದಿವೆ. ಈ ಮನೆಗಳಿಗೆ ಹೋಗಲು ಅಲ್ಪಸಂಖ್ಯಾತರು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಈ ತೀರ್ಮಾನ ಮಾಡಿದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.