ADVERTISEMENT

ಕಾಂಗ್ರೆಸ್ ಪಕ್ಷದ 20 ಶಾಸಕರು ಬಿಜೆಪಿಗೆ ಬರಲು ಸಿದ್ಧ: ನಳಿನ್‌ ಕುಮಾರ್ ಕಟೀಲ್

ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 22:54 IST
Last Updated 22 ಸೆಪ್ಟೆಂಬರ್ 2021, 22:54 IST
ಬಿಜೆಪಿ ಒಬಿಸಿ ಮೋರ್ಚಾ ಬುಧವಾರ ಆಯೋಜಿಸಿದ್ದ ಹಿಂದುಳಿದ ಸಮುದಾಯಕ್ಕೆ ಸೇರಿದ ಸಚಿವರು, ಶಾಸಕರು ಮತ್ತು ಸಂಸದರ ಸನ್ಮಾನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ನಳಿನ್‌ಕುಮಾರ್‌ ಕಟೀಲ್, ನೆ.ಲ.ನರೇಂದ್ರ ಬಾಬು, ಕೆ.ಎಸ್‌.ಈಶ್ವರಪ್ಪ ಮುಂತಾದವರು ಇದ್ದಾರೆ.
ಬಿಜೆಪಿ ಒಬಿಸಿ ಮೋರ್ಚಾ ಬುಧವಾರ ಆಯೋಜಿಸಿದ್ದ ಹಿಂದುಳಿದ ಸಮುದಾಯಕ್ಕೆ ಸೇರಿದ ಸಚಿವರು, ಶಾಸಕರು ಮತ್ತು ಸಂಸದರ ಸನ್ಮಾನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ನಳಿನ್‌ಕುಮಾರ್‌ ಕಟೀಲ್, ನೆ.ಲ.ನರೇಂದ್ರ ಬಾಬು, ಕೆ.ಎಸ್‌.ಈಶ್ವರಪ್ಪ ಮುಂತಾದವರು ಇದ್ದಾರೆ.   

ಬೆಂಗಳೂರು: ಕಾಂಗ್ರೆಸ್‌ ಪಕ್ಷದ 20 ಶಾಸಕರು ಬಿಜೆಪಿ ಸೇರಲು ಸಿದ್ದರಾಗಿದ್ದು, ಅವರನ್ನು ಬಲೆ ಹಾಕಿ ಸೆಳೆಯುವ ಕೆಲಸವನ್ನು ಸಚಿವ ಮುನಿರತ್ನ ಅವರಿಗೆ ವಹಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದರು.

ನಗರದ ಚೌಡಯ್ಯಸ್ಮಾರಕ ಭವನದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಏರ್ಪಡಿಸಿದ್ದ ಒಬಿಸಿ ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷವನ್ನು ಹಿಂದುಳಿದ ವರ್ಗದವರು ದೂರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಅನೇಕ ನಾಯಕರು ಬಿಜೆಪಿಗೆ ಸೇರಲಿದ್ದಾರೆ. ಹಿಂದುಳಿದ ವರ್ಗದ ಕಂಚಿನ ಕಂಠಕ್ಕೆ ಹಕ್ಕು ಧ್ವನಿಯನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಸಿದ್ದರಾಮಯ್ಯ ಅವರ ಅಹಿಂದ ಹೋರಾಟ ಅಧಿಕಾರಕ್ಕೆ ಸೀಮಿತವಾಯಿತು. ಆದರೆ, ನಮ್ಮ ಸರ್ಕಾರವು ವಿದ್ಯಾರ್ಥಿಗಳಿಗೆ ಮೀಸಲಾತಿ, ಹೆಚ್ಚು ಶಿಷ್ಯ ವೇತನ ನೀಡಿದೆ. ಹಿಂದುಳಿದ ಜಾತಿ ಪಟ್ಟಿಗೆ ಜಾತಿ ಸೇರ್ಪಡೆಯ ಅವಕಾಶವನ್ನೂ ರಾಜ್ಯಗಳಿಗೆ ನೀಡಿದೆ. ಹಿಂದುಳಿದ ವರ್ಗಗಳ ಸಮುದಾಯದ ಜವಾಬ್ದಾರಿಯನ್ನು ಈಶ್ವರಪ್ಪ ಅವರಿಗೆ ನೀಡಿದ್ದೇವೆ. ನೆ.ಲ. ನರೇಂದ್ರ ಬಾಬು ಅವರ ಜತೆಗೂಡಿ ಒಬಿಸಿಯ ಎಲ್ಲ ಸಮುದಾಯದವರನ್ನು ಬಿಜೆಪಿ ತರಲಿದ್ದಾರೆ ಎಂದು ನಳಿನ್‌ ವಿವರಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ ‘ಕಾಂಗ್ರೆಸ್‌ ಪಕ್ಷವು ಹಿಂದುಳಿದ ವರ್ಗದವರಿಗೆ ಮೋಸ ಮಾಡಿದೆ. ಅದನ್ನು ಒಬಿಸಿ ಸಮುದಾಯದವರೂ ಅರ್ಥ ಮಾಡಿಕೊಂಡಿದ್ದಾರೆ. ಈ ವರ್ಗದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಯೋಜನೆಗಳನ್ನು ತಿಳಿಸಬೇಕು’ ಎಂದು ಹೇಳಿದರು.

ಸಚಿವರಾದ ಕೆ.ಎಸ್.ಈಶ್ವರಪ್ಪ,ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್‌ ಕುಮಾರ್‌, ಎಂ.ಟಿ.ಬಿ. ನಾಗರಾಜ್‌, ಬೈರತಿ ಬಸವರಾಜ್,ಮುನಿರತ್ನ, ಆನಂದಸಿಂಗ್‌, ಸಂಸದ ಪಿ.ಸಿ. ಮೋಹನ್‌ ಮತ್ತು ರಾಜ್ಯಸಭೆ ಸದಸ್ಯರಾದ ನಾರಾಯಣ ಅವರನ್ನು ಗೌರವಿಸಲಾಯಿತು.

‘ಸ್ವತಂತ್ರ ಚಿಂತನೆಯೊಂದಿಗೆ ಜಾಗೃತರಾಗಿ’
ಹಿಂದುಳಿದ ವರ್ಗ ದೇಶಕ್ಕೆ ಹಲವಾರು ದೊಡ್ಡ ಮತ್ತು ಉತ್ತಮ ನಾಯಕರನ್ನು ನೀಡಿದೆ. ಅಂಥ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೇರು ಪಂಕ್ತಿಯಲ್ಲಿದ್ದು, ಮುಕುಟಪ್ರಾಯರ ಎನಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಒಬಿಸಿ ಮೋರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಹಿಂದುಳಿದ ವರ್ಗದವರನ್ನು ಗುತ್ತಿಗೆ ತೆಗೆದುಕೊಂಡ ರೀತಿಯಲ್ಲಿ ವರ್ತಿಸುತ್ತಿತ್ತು. ಆದರೆ ಪ್ರಧಾನಿ ಮೋದಿ ಬಂದ ಬಳಿಕ ಹಿಂದುಳಿದ ವರ್ಗದವರ ಕುರಿತಾಗಿದ್ದ ಸಾಮಾಜಿಕ ಹಾಗೂ ರಾಜಕೀಯ ಲೆಕ್ಕಾಚಾರವೇ ಬದಲಾಯಿತು ಎಂದರು.

‘ಹಿಂದುಳಿದ ವರ್ಗದವರು ಸ್ವತಂತ್ರವಾಗಿ ಚಿಂತನೆ ಮಾಡಬೇಕು ಮತ್ತು ಜಾಗೃತರಾಗಬೇಕು. ಸಾಮಾಜಿಕ ನ್ಯಾಯ ಮತ್ತು ಸಮನಾದ ಅವಕಾಶ ಕೊಡಿ ಎಂದು ಕೇಳಿ. ಆಗ ನಾವು ನಮ್ಮದೇ ಹಂತದಲ್ಲೇ ಬೆಳೆಯುತ್ತೇವೆ. ಆಕಾಶಕ್ಕೂ ಏಣಿ ಹಾಕುತ್ತೇವೆ ಎಂಬ ಭಾವನೆ ಬರಲಿ’ ಎಂದರು.

‘ಬಿಜೆಪಿ ನಿಮಗೆ ಅವಕಾಶ ಕೊಡುವುದರ ಮೂಲಕ ಹಿಂದುಳಿದ ವರ್ಗದವರಿಗೆ ನೈಜವಾಗಿ, ಸಾತ್ವಿಕವಾಗಿ, ಸಾರ್ಥಕತೆ ತುಂಬಿರುವ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಎಲ್ಲಾ ಹಿಂದುಳಿದ ನಾಯಕರ ಜತೆಗೆ ಚರ್ಚೆ ಮಾಡಿ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಏನೆಲ್ಲ ಕೆಲಸ ಮಾಡಬೇಕೆಂಬ ಚಿಂತನೆಯೊಂದಿಗೆ ಹಿಂದುಳಿದ ವರ್ಗದ ಅಭಿವೃದ್ಧಿಗೆ ಸಿದ್ಧರಿದ್ದೇವೆ’ ಎಂದರು.

***

ಮುಂದಿನ ವಿಧಾನಸಭೆ ಚುನಾವಣೆಗೂ ಮೊದಲೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಎರಡು ಹೋಳಾಗಲಿದೆ.
-ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.