ADVERTISEMENT

ಗ್ರಾ.ಪಂ. ಚುನಾವಣೆಗೆ ₹ 205.34 ಕೋಟಿ: ರಾಜ್ಯ ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 19:30 IST
Last Updated 11 ಡಿಸೆಂಬರ್ 2020, 19:30 IST
ಕರ್ನಾಟಕ ಚುನಾವಣಾ ಆಯೋಗದ ಕಚೇರಿ
ಕರ್ನಾಟಕ ಚುನಾವಣಾ ಆಯೋಗದ ಕಚೇರಿ   

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ₹ 205.34 ಕೋಟಿ ಅಗತ್ಯವಿದ್ದು, ಈವರೆಗೆ ₹ 100 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ ₹ 105.34 ಕೋಟಿಯನ್ನು ಬಿಡುಗಡೆ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆರಾಜ್ಯ ಚುನಾವಣಾ ಆಯೋಗ ಪತ್ರ ಬರೆದಿದೆ.

‘ಈ ಬಾರಿ ಕೋವಿಡ್‌ ಪರಿಸ್ಥಿತಿಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಚುನಾವಣೆ ನಡೆಸಬೇಕಾಗಿದೆ.
ಹೀಗಾಗಿ, ಇಷ್ಟು ದೊಡ್ಡ ಮೊತ್ತದ ಅಗತ್ಯವಿದೆ’ ಎಂದು ಪತ್ರದಲ್ಲಿ ಆಯೋಗ ವಿವರಿಸಿದೆ. ಈ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ಬಿಡುಗಡೆ ಮಾಡಿರುವ ₹ 100 ಕೋಟಿ ಅನುದಾನದಲ್ಲಿ, ಮತದಾರರ ಪಟ್ಟಿಯ ಮುದ್ರಣಕ್ಕೆ ತಗಲುವ ವೆಚ್ಚ ಮತ್ತು ಇತರ ಚುನಾವಣಾ ವೆಚ್ಚಗಳಿಗಾಗಿ ಜಿಲ್ಲಾಧಿಕಾರಿಗಳಿಗೆ ₹ 68. 75 ಕೋಟಿ ನೀಡಲಾಗಿದೆ. ಉಳಿದಂತೆ, ಕೋವಿಡ್‌ ಕಾರಣದಿಂದ ಚುನಾವಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಉದ್ದೇಶದಿಂದ ಕೋವಿಡ್‌ ಸಾಮಗ್ರಿಗಳ ಖರೀದಿಗೆ ₹ 20 ಕೋಟಿ, ಮತಪತ್ರಗಳ ಮುದ್ರಣಕ್ಕೆ ಮ್ಯಾಪ್‌ಲಿಥೊ ಕಾಗದ ಖರೀದಿಗೆ ₹ 1.07 ಕೋಟಿ, ಸರ್ಕಾರಿ ಮುದ್ರಣಾಲಯಕ್ಕೆ ಅಂದಾಜು ₹ 3 ಕೋಟಿ ಸೇರಿ ಒಟ್ಟು ₹ 24.07 ಕೋಟಿಯನ್ನು ಶೀಘ್ರದಲ್ಲೇ ಬಿಡುಗಡೆಗೆ ಮಾಡಲಾಗುವುದು. ಬಾಕಿ ₹ 7.18 ಕೋಟಿ ಮಾತ್ರ ಇದೆ. ಹೀಗಾಗಿ, ಬಿಡುಗಡೆಗೆ ಬಾಕಿ ಇರುವ ಹಣವನ್ನು (₹ 105.34 ಕೋಟಿ) ತುರ್ತು ಆಗಿ ಬಿಡುಗಡೆ ಮಾಡಬೇಕು ಎಂದೂ ಪತ್ರದಲ್ಲಿ ಆಯೋಗ ಕೋರಿದೆ.

‘ಕೋವಿಡ್‌ ಸಾಮಗ್ರಿ ಖರೀದಿ ಸೇರಿ ಪ್ರತಿ ಮತಗಟ್ಟೆಗೆ ತಲಾ ₹ 5,000ದಂತೆ ಈ ಬಾರಿ ಹೆಚ್ಚುವರಿ ವೆಚ್ಚ ಅಂದಾಜಿಸಲಾಗಿದೆ. ಅದನ್ನು ಲೆಕ್ಕ ಮಾಡಿ ಚುನಾವಣಾ ವೆಚ್ಚ ಅಂದಾಜಿಸಲಾಗಿದೆ’ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಹೊನ್ನಾಂಬ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.