ADVERTISEMENT

24 ಮಂದಿಗೆ ಜ್ಞಾನ ಫೆಲೋಶಿಪ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಯೋಜನಾ ಇಲಾಖೆ ಸೇರಿದಂತೆ ರಾಜ್ಯದ ಹತ್ತು ಇಲಾಖೆಗಳ ಜೊತೆ `ಫೆಲೊ~ಗಳಾಗಿ ಕೆಲಸ ನಿರ್ವಹಿಸಲು 24 ಮಂದಿ ಆಯ್ಕೆಯಾಗಿದ್ದಾರೆ ಎಂದು `ಕರ್ನಾಟಕ ಜ್ಞಾನ ಆಯೋಗ~ದ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಅವರು ಘೋಷಿಸಿದರು.

ಶನಿವಾರ ಇಲ್ಲಿ ನಡೆದ ಜ್ಞಾನ ಆಯೋಗದ ಮೊದಲ ಅವಧಿಯ ಅಂತಿಮ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು, `ಜ್ಞಾನ ಫೆಲೊಗಳ ಪೈಕಿ 10 ಮಂದಿ ಮಹಿಳೆಯರು. ಫೆಲೊಗಳು ರಾಜ್ಯದ ವಿವಿಧ ಪ್ರದೇಶ, ವರ್ಗಗಳ ಪ್ರಾತಿನಿಧಿಕ ರೂಪದಂತಿದ್ದಾರೆ~ ಎಂದು ತಿಳಿಸಿದರು.

ರಾಜ್ಯವನ್ನು ಜ್ಞಾನ ಸಮಾಜವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತ ಅಧ್ಯಯನ ಆಯೋಗದ ಕಾರ್ಯಸೂಚಿಯಾಗಿತ್ತು. ಮೂರು ವರ್ಷಗಳ ಅವಧಿಯಲ್ಲಿ ಆಯೋಗ ಸರ್ಕಾರಕ್ಕೆ 60 ಶಿಫಾರಸುಗಳನ್ನು ಸಲ್ಲಿಸಿದೆ. ಇವುಗಳಲ್ಲಿ 12 ಶಿಫಾರಸುಗಳು ಅನುಷ್ಠಾನಕ್ಕೆ ಬಂದಿದ್ದು, 22 ಶಿಫಾರಸುಗಳ ಅನುಷ್ಠಾನ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ಜ್ಞಾನ ಆಯೋಗದ ವತಿಯಿಂದ ಆರು ಅಧ್ಯಯನಗಳು ನಡೆದಿವೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಒಂಬತ್ತು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಆಯೋಗದ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಕಾಲಕಾಲಕ್ಕೆ ಪರಿಶೀಲಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಸರ್ಕಾರದ ವಿವಿಧ ಇಲಾಖೆಗಳು ಆಯೋಗದ ಕಾರ್ಯಗಳನ್ನು ಪರಿಶೀಲಿಸಿವೆ ಎಂದು ತಿಳಿಸಿದರು.

ರೂ 17 ಕೋಟಿ: ಆಯೋಗ ಮೂರು ವರ್ಷಗಳ ಅವಧಿಯಲ್ಲಿ 17 ರೂಪಾಯಿ ಖರ್ಚು ಮಾಡಿದೆ. ಆಯೋಗದ ಖರ್ಚುವೆಚ್ಚಗಳ ಕುರಿತು ಬೆಂಗಳೂರು ಮೂಲದ `ಸಾರ್ವಜನಿಕ ವ್ಯವಹಾರಗಳ ಕೇಂದ್ರ~ ಪರಿಶೀಲನೆ ನಡೆಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ತನ್ನ ವರದಿ ಸಲ್ಲಿಸಲಿದೆ ಎಂದರು.

`ವೆಚ್ಚವಾದ 17 ಕೋಟಿ ರೂಪಾಯಿಯಲ್ಲಿ ಶೇಕಡ 80ರಷ್ಟು ಭಾಗ ಯೋಜನೆಗಳು ಮತ್ತು ಸಂಶೋಧನೆಗಳಿಗೆ ವಿನಿಯೋಗವಾಗಿದೆ. ಇನ್ನುಳಿದ ಮೊತ್ತ ಆಯೋಗದ ಆಡಳಿತ ಮತ್ತು ಇತರೆ ಅಗತ್ಯಗಳಿಗೆ ಆಗಿರಬಹುದು~ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ. ಶ್ರೀಧರ್ ತಿಳಿಸಿದರು.

ಆಯೋಗ ಇನ್ನೂ ಎರಡು ವರ್ಷ ಕಸ್ತೂರಿ ರಂಗನ್ ಮತ್ತು ಪ್ರೊ. ಶ್ರೀಧರ್ ಅವರ ನೇತೃತ್ವದಲ್ಲೇ ಕಾರ್ಯ ನಿರ್ವಹಿಸಲಿದೆ.  ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ಎರಡು ವರ್ಷಗಳಿಗೆ ಆಯೋಗದ ಕಾರ್ಯವ್ಯಾಪ್ತಿಯ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.