ADVERTISEMENT

ಜಿಲ್ಲಾ ರಂಗಮಂದಿರ: ಅನುದಾನಕ್ಕೆ ₹3 ಕೋಟಿ ಮಿತಿ- ಸಚಿವ ವಿ. ಸುನಿಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 16:05 IST
Last Updated 15 ಸೆಪ್ಟೆಂಬರ್ 2022, 16:05 IST
   

ಬೆಂಗಳೂರು: ಜಿಲ್ಲಾ ರಂಗಮಂದಿರಗಳ ನಿರ್ಮಾಣಕ್ಕೆ ತಲಾ ₹ 3 ಕೋಟಿ ಮತ್ತು ತಾಲ್ಲೂಕು ರಂಗಮಂದಿರಗಳ ನಿರ್ಮಾಣಕ್ಕೆ ತಲಾ ₹ 1 ಕೋಟಿ ಅನುದಾನವನ್ನು ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್‌.ಎ. ರವೀಂದ್ರನಾಥ್‌ ಪ್ರಶ್ನೆಗೆ ಗುರುವಾರ ಉತ್ತರ ನೀಡಿದ ಅವರು, ‘ಜಿಲ್ಲಾ ರಂಗಮಂದಿರ ಮತ್ತು ತಾಲ್ಲೂಕು ರಂಗಮಂದಿರ ನಿರ್ಮಾಣಕ್ಕೆ ಆರಂಭದ ಅಂದಾಜುಪಟ್ಟಿಯ ಹಲವು ಪಟ್ಟು ಅನುದಾನ ಪಡೆಯುತ್ತಿರುವ ಉದಾಹರಣೆಗಳಿವೆ. ಮುಂದಿನ ದಿನಗಳಲ್ಲಿ ಅನುಕ್ರಮವಾಗಿ ₹ 3 ಕೋಟಿ ಮತ್ತು ₹ 1 ಕೋಟಿಯನ್ನು ಮಾತ್ರ ಇಲಾಖೆಯಿಂದ ನೀಡಲಾಗುವುದು. ಹೆಚ್ಚಿನ ಹಣ ಬೇಕಿದ್ದರೆ ಇತರ ಮೂಲಗಳಿಂದ ಭರಿಸಬೇಕು’ ಎಂದರು.

‘2010ರಲ್ಲಿ ₹ 3.5 ಕೋಟಿ ವೆಚ್ಚದಲ್ಲಿ ದಾವಣಗೆರೆ ಜಿಲ್ಲಾ ರಂಗಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನಂತರ ಅಂದಾಜು ಪಟ್ಟಿಯನ್ನು ₹ 4.5 ಕೋಟಿಗೆ ಹೆಚ್ಚಿಸಲಾಗಿತ್ತು. ಈಗ ಇಲಾಖೆಯ ಪೂರ್ವಾನುಮತಿ ಇಲ್ಲದೆ ₹ 8.5 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆಯಾಗಿದೆ. ಹೀಗೆ ವೆಚ್ಚ ಏರಿಕೆಯಾಗುತ್ತಾ ಹೋದರೆ ಹಣ ಎಲ್ಲಿಂದ ತರುವುದು’ ಎಂದು ಕೇಳಿದರು.

ADVERTISEMENT

ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ‘ನನ್ನ ಕ್ಷೇತ್ರದಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಮೊದಲು ₹ 4 ಕೋಟಿ ವೆಚ್ಚದ ಅಂದಾಜು ಪಟ್ಟಿ ಇತ್ತು. ನಂತರ ₹ 8 ಕೋಟಿಗೆ ಹೆಚ್ಚಿಸಲಾಗಿತ್ತು. ಈಗ ₹ 12 ಕೋಟಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದರು.

ಉಗ್ರಾಣದಂತಹ ರಂಗಮಂದಿರ: ಬಿಜೆಪಿಯ ಸಿ.ಟಿ. ರವಿ ಮಾತನಾಡಿ, ‘ದಾವಣಗೆರೆ ಜಿಲ್ಲಾ ರಂಗಮಂದಿರದ ವಿನ್ಯಾಸವೇ ಸರಿ ಇಲ್ಲ. ನಾನು ಸಚಿವನಾಗಿದ್ದ ಅವಧಿಯಲ್ಲಿ ಖುದ್ದಾಗಿ ವೀಕ್ಷಿಸಿದ್ದೇನೆ. ಉಗ್ರಾಣದ ರೀತಿಯಲ್ಲಿ ರಂಗಮಂದಿರ ಕಟ್ಟಡ ನಿರ್ಮಿಸಲಾಗಿದೆ. ಅದಕ್ಕೆ ಇನ್ನೂ ಅನುದಾನ ನೀಡಬೇಕೆ ಪರಿಶೀಲಿಸಿ’ ಎಂದರು.

ಕಾರ್ಯಾಂಗದ ವಿರುದ್ಧ ಸ್ಪೀಕರ್‌ ಅಸಮಾಧಾನ

‘ಸರ್ಕಾರದ ಕೆಲಸಗಳ ವಿಚಾರದಲ್ಲಿ ಎಲ್ಲದಕ್ಕೂ ಶಾಸಕರಷ್ಟೇ ಹೊಣೆ ಎಂಬ ಭಾವನೆ ಎಲ್ಲ ಕಡೆಯೂ ಇದೆ. ಕಾರ್ಯಾಂಗದವರು ಯಾವುದಕ್ಕೂ ಹೊಣೆಗಾರರಲ್ಲ ಎಂಬ ಭಾವನೆ ಬೆಳೆದಿದೆ. ಮಾಧ್ಯಮಗಳು, ಜನರು ಎಲ್ಲರೂ ಇದೇ ರೀತಿ ನೋಡುತ್ತಿದ್ದಾರೆ’ ಎಂದು ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ರಂಗಮಂದಿರಗಳ ವೆಚ್ಚ ಏರಿಕೆ ಕುರಿತು ಪ್ರಶ್ನೋತ್ತರ ವೇಳೆಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ‘ನಮ್ಮನ್ನೇ ಮೊದಲ ಆರೋಪಿ ಎನ್ನಲಿ. ಆದರೆ, ಎರಡನೆ ಅಥವಾ ಮೂರನೇ ಆರೋಪಿಗಳು ಕಾರ್ಯಾಂಗದವರು ಆಗಬೇಕಲ್ಲವೆ? ಅವರೆಲ್ಲರೂ ಸುರಕ್ಷಿತವಾಗಿ ಅವಧಿ ಮುಗಿಸಿ ನಿವೃತ್ತರಾಗುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.