ADVERTISEMENT

30 ವರ್ಷದಲ್ಲಿ 3821 ಪಿ.ಯು ಕಾಲೇಜು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST

ಬೆಂಗಳೂರು: ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಮಹತ್ವದ ತಿರುವು ಎಂದು ಪರಿಗಣಿಸುವ ಪದವಿ ಪೂರ್ವ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅದಕ್ಕೆ ಪೂರ್ಣವಾಗಿ ಪದವಿ ಪೂರ್ವ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಪ್ರಥಮ ಮತ್ತು ದ್ವಿತೀಯ ಪಿಯು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ರಾಜ್ಯದಲ್ಲಿ ಅಂದಾಜು 13 ಲಕ್ಷ ಇದ್ದರೆ, ಪಿ.ಯು ಕಾಲೇಜುಗಳ ಸಂಖ್ಯೆ 5004.

ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು 1973ರಲ್ಲಿ ಕಾರ್ಯಾರಂಭ ಮಾಡಿತು. ಆಗ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 42,095 ಆಗಿತ್ತು. 1979ನೇ ಸಾಲಿನಲ್ಲಿ ಪಿಯುಸಿಯನ್ನು ಎರಡು ವರ್ಷಗಳ ಕೋರ್ಸ್‌ ಆಗಿ ಪರಿವರ್ತಿಸಲಾಯಿತು.

ADVERTISEMENT

2018ರ ಮಾರ್ಚ್‌ ಪರೀಕ್ಷೆಗೆ ನೋಂದಾಯಿಸಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳ ಸಂಖ್ಯೆ 6.90 ಲಕ್ಷ. ಅಂದರೆ 45 ವರ್ಷದಲ್ಲಿ ಪಿಯು (ಪಬ್ಲಿಕ್‌ ಪರೀಕ್ಷೆ) ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 6.47 ಲಕ್ಷ ಹೆಚ್ಚಾಗಿದೆ.

ಕಾಲೇಜುಗಳ ಮಾಹಿತಿ: ಆರಂಭದಲ್ಲಿ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಿತ್ತು. ಆದರೆ ಕ್ರಮೇಣ ಖಾಸಗಿ ಅನುದಾನರಹಿತ ಕಾಲೇಜುಗಳು ಹೆಚ್ಚಾಗಿವೆ. 1987ರಲ್ಲಿ 1183 ಜೂನಿಯರ್‌ ಕಾಲೇಜುಗಳು ಇದ್ದವು. ಇದರಲ್ಲಿ 382 ಸರ್ಕಾರಿ ಹಾಗೂ 801 ಅನುದಾನಿತ ಕಾಲೇಜುಗಳಾಗಿದ್ದವು. ಪ್ರಸ್ತುತ ರಾಜ್ಯದಲ್ಲಿ ಒಟ್ಟಾರೆ 5004 ಪದವಿ ಪೂರ್ವ ಕಾಲೇಜುಗಳಿವೆ. ಅಂದರೆ 30 ವರ್ಷಗಳಲ್ಲಿ 3821 ಕಾಲೇಜುಗಳು ಹೆಚ್ಚಾಗಿವೆ.

ಇವುಗಳಲ್ಲಿ 1204 ಸರ್ಕಾರಿ ಪಿಯು ಕಾಲೇಜುಗಳಾಗಿದ್ದರೆ, 797 ಅನುದಾನಿತ, 2828 ಖಾಸಗಿ ಅನುದಾನರಹಿತ ಪಿಯು ಕಾಲೇಜುಗಳಾಗಿವೆ. ಅಲ್ಲದೆ ಬಿಬಿಎಂಪಿಯ 13 ಮತ್ತು ಪದವಿ ಕಾಲೇಜಿನಿಂದ ಬೇರ್ಪಟ್ಟ (ಬೈಫರ್‌ಗೇಟೆಡ್‌) 162 ಪಿ.ಯು ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.

1299 ಖಾಸಗಿ ಕಾಲೇಜು: ರಾಜ್ಯದಲ್ಲಿ 2008ರಲ್ಲಿ 3437 ಪಿಯು ಕಾಲೇಜುಗಳಿದ್ದವು, ಆಗ 1201 ಸರ್ಕಾರಿ ಪಿಯು ಕಾಲೇಜುಗಳು, 529 ಅನುದಾ
ನಿತ ಹಾಗೂ 1529 ಖಾಸಗಿ ಅನುದಾನ ರಹಿತ ಕಾಲೇಜುಗಳು ಇದ್ದವು. 10 ವರ್ಷಗಳಲ್ಲಿ ಕೇವಲ 3 ಸರ್ಕಾರಿ ಪಿಯು ಕಾಲೇಜುಗಳು ಹೆಚ್ಚಾಗಿವೆ. 268 ಅನುದಾನಿತ ಕಾಲೇಜುಗಳು ಕಡಿಮೆಯಾಗಿವೆ. ಆದರೆ 1299 ಖಾಸಗಿ ಅನುದಾನಿತ ಕಾಲೇಜುಗಳು ಹೆಚ್ಚಾಗಿವೆ.

ಶೇಕಡಾವಾರು ಮಾಹಿತಿ: ಒಟ್ಟು ಪಿ.ಯು ಕಾಲೇಜುಗಳಲ್ಲಿ ಶೇ 24.06ರಷ್ಟು ಸರ್ಕಾರಿ, ಶೇ 15.93ರಷ್ಟು ಅನುದಾನಿತ, ಶೇ 56.51ರಷ್ಟು  ಖಾಸಗಿ ಅನು
ದಾನರಹಿತ, ಶೇ 0.26ರಷ್ಟು ಬಿಬಿಎಂಪಿ ಕಾಲೇಜು ಹಾಗೂ ಶೇ 3.24ರಷ್ಟು ಪದವಿ ಕಾಲೇಜಿನಿಂದ ಬೇರ್ಪಟ್ಟ
ಪಿ.ಯು ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.

ಸರಳಗೊಂಡ ನಿಯಮಗಳು:  ಕಾಲೇಜು ಆರಂಭಿಸಲು ಇರುವ ನಿಯಮಗಳನ್ನು ಸರಳಗೊಳಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಕಾಲೇಜುಗಳು ಪ್ರಾರಂಭವಾಗುತ್ತಿವೆ. ಯಾವುದೇ ಹೊಸ ಕಾಲೇಜು ಆರಂಭವಾಗುವ ಪ್ರದೇಶದ ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯಲ್ಲಿ ಕಾಲೇಜುಗಳಿದ್ದರೆ, ಅಲ್ಲಿಂದ ನಿರಾ
ಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಬೇಕು ಎಂಬ ಷರತ್ತು ಇತ್ತು. ಈಗ ಅದನ್ನು ಗಾಳಿಗೆ ತೂರಲಾಗಿದೆ. ಇದರಿಂದ ನಗರ ಪ್ರದೇಶಗಳಲ್ಲಿ ಕಿ.ಮೀ ವ್ಯಾಪ್ತಿಯಲ್ಲಿಯೇ ಹತ್ತಾರು ಕಾಲೇಜುಗಳಿವೆ ಎಂದು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದರು.

ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಕಾಲೇಜು
ಜಿಲ್ಲಾವಾರು ಕಾಲೇಜುಗಳ ಸಂಖ್ಯೆಯನ್ನು ಪರಿಶೀಲಿಸಿದರೆ ಬೆಂಗಳೂರು ದಕ್ಷಿಣ ಜಿಲ್ಲೆಯು ಅತಿ ಹೆಚ್ಚು ಕಾಲೇಜುಗಳನ್ನು (439) ಹೊಂದಿದ್ದರೆ, ಚಾಮರಾಜನಗರ (62) ಅತಿ ಕಡಿಮೆ ಕಾಲೇಜುಗಳನ್ನು ಹೊಂದಿರುವ ಜಿಲ್ಲೆಯಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಸರ್ಕಾರಿ ಕಾಲೇಜುಗಳು ಹಾಸನ (89) ಜಿಲ್ಲೆಯಲ್ಲಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಅತಿ ಕಡಿಮೆ (21) ಸರ್ಕಾರಿ ಪಿ.ಯು ಕಾಲೇಜುಗಳಿವೆ. ಅದೇ ರೀತಿ ಅನುದಾನಿತ ಪಿ.ಯು ಕಾಲೇಜುಗಳನ್ನು ಗಮನಿಸಿದರೆ ತುಮಕೂರಿನಲ್ಲಿ (84) ಅತಿ ಹೆಚ್ಚು ಮತ್ತು ಯಾದಗಿರಿಯಲ್ಲಿ (4) ಅತಿ ಕಡಿಮೆ ಕಾಲೇಜುಗಳಿವೆ.

ಖಾಸಗಿ ಅನುದಾನ ರಹಿತ ಪಿ.ಯು ಕಾಲೇಜುಗಳು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತಿ ಹೆಚ್ಚು (353) ಹಾಗೂ ರಾಮನಗರದಲ್ಲಿ ಅತಿ ಕಡಿಮೆ (29) ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.