ADVERTISEMENT

33,863 ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 16:22 IST
Last Updated 3 ಜೂನ್ 2024, 16:22 IST
   

ಬೆಂಗಳೂರು: 2024–25ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ (ಪಿಎಸ್‌ಟಿ ಮತ್ತು ಜಿಪಿಟಿ) ಒಟ್ಟು 33,863 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ವಿಜಯಪುರ (1,336), ಕಲಬುರಗಿ (1,832), ಕೊಪ್ಪಳ (1,758), ರಾಯಚೂರು (3,205), ಯಾದಗಿರಿ (2,259), ಚಿಕ್ಕೋಡಿ (2,231), ಬಳ್ಳಾರಿ (1,470), ಬಾಗಲಕೋಟೆ (1,088), ಬೆಳಗಾವಿ (1,457), ಬೆಂಗಳೂರು ದಕ್ಷಿಣ (1,092), ದಕ್ಷಿಣ ಕನ್ನಡ (1,033) ಮತ್ತು ಮೈಸೂರು (1,001) ಶೈಕ್ಷಣಿಕ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ಕಾಯಂ ಶಿಕ್ಷಕರು ನೇಮಕ ಆಗುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಯಾವುದು ಮೊದಲೊ ಅಲ್ಲಿಯವರೆಗೆ ಶಿಕ್ಷಕರ ಕೊರತೆಯನ್ನು ನೀಗಿಸಲು ಜಿಲ್ಲಾವಾರು, ತಾಲ್ಲೂಕುವಾರು 35 ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಇದೇ ಜೂನ್‌ 1ರಂದು ಅನುಮತಿ ನೀಡಿ ಇಲಾಖೆ ಆದೇಶ ಹೊರಡಿಸಿತ್ತು. ಮೊದಲ ಹಂತದಲ್ಲಿ 33,863 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸೋಮವಾರ ಅನುಮತಿ ನೀಡಿದೆ.

ADVERTISEMENT

ಮಂಜೂರಾದ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಮಾತ್ರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು, ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ಆಯ್ಕೆ ಹೊಣೆಯನ್ನು ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ಮತ್ತು ಶಿಕ್ಷಕರಹಿತ ಶಾಲೆಗಳಿಗೆ ಹಾಗೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಆದ್ಯತೆಯಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದೂ ಸೂಚಿಸಲಾಗಿದೆ.

ಕರ್ನಾಟಕ ಪಬ್ಲಿಕ್‌ ಶಾಲೆ, ಬೆಂಗಳೂರು ಪಬ್ಲಿಕ್‌ ಶಾಲೆ, ದ್ವಿ ಭಾಷಾ (ಆಂಗ್ಲ ಭಾಷಾ) ತರಗತಿಗಳಿರುವ ಶಾಲೆಗಳು ಮತ್ತು ಆದರ್ಶ ವಿದ್ಯಾಲಯಗಳಲ್ಲಿ ಶೇ 100ರಷ್ಟು ಅತಿಥಿ ಶಿಕ್ಷಕರನ್ನು ಆದ್ಯತೆಯಡಿ ತುಂಬಬೇಕು, ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ, ಮೆರಿಟ್‌ ಆಧಾರದಲ್ಲಿ ಆಯ್ಕೆ ಮಾಡಬೇಕು, ಅತಿಥಿ ಶಿಕ್ಷಕರ ಗೌರವ ಸಂಭಾವನೆಯು ತಿಂಗಳಿಗೆ ₹10 ಸಾವಿರ ಎಂದೂ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.