ADVERTISEMENT

ರಾಜ್ಯದಲ್ಲಿ ಲೂಟಿಯಾದ ಅದಿರು 3 ಕೋಟಿ ಟನ್‌ ಅಲ್ಲ... 35 ಕೋಟಿ ಟನ್‌ !

ದೂಳು ಹಿಡಿಯುತ್ತಿದೆ ಎಚ್‌.ಕೆ. ಪಾಟೀಲರ ಸಮಿತಿ ವರದಿ

ಹೊನಕೆರೆ ನಂಜುಂಡೇಗೌಡ
Published 26 ಅಕ್ಟೋಬರ್ 2019, 2:39 IST
Last Updated 26 ಅಕ್ಟೋಬರ್ 2019, 2:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಲೂಟಿಯಾದ ಅದಿರಿನ ಪ್ರಮಾಣ ಲೋಕಾಯುಕ್ತ ವರದಿ ಹೇಳಿರುವಂತೆ ಕೇವಲ 3 ಕೋಟಿ ಟನ್‌ ಅಲ್ಲ; ಅದು 35 ಕೋಟಿ ಟನ್‌!

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್‌.ಕೆ. ಪಾಟೀಲರ ನೇತೃತ್ವದ ಅಂದಿನ ಸಂಪುಟ ಉಪ ಸಮಿತಿ ಈ ಅಂದಾಜು ಮಾಡಿದ್ದು, ಉದ್ಯಮಿಗಳಿಂದ ನಷ್ಟ ವಸೂಲು ಮಾಡುವಂತೆ ಹೇಳಿದ್ದರೂ ಸರ್ಕಾರ ಕ್ರಮಕ್ಕೆ ಮುಂದಾಗಿಲ್ಲ.

ಅಕ್ರಮ ಗಣಿಗಾರಿಕೆ ಆರೋಪಕ್ಕೆಒಳಗಾಗಿರುವ ಪ್ರಭಾವಿ ರಾಜಕಾರಣಿಗಳು ವಿವಿಧ ಬಗೆಯ ತೆರಿಗೆಗಳನ್ನು ವಂಚಿಸಿದ್ದಾರೆ. ಈ ಜಾಲ ವಿವಿಧ ರಾಜ್ಯಗಳಲ್ಲೂ ಹರಡಿಕೊಂಡಿದ್ದು, ಲೆಕ್ಕ ತೋರಿಸದ ಭಾರಿ ಹಣ ವರ್ಗಾವಣೆ ಆಗಿರುವುದರಿಂದ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಕ್ರಮ ಕೈಗೊಳ್ಳುವಂತೆಯೂ ಸಮಿತಿ ತಾಕೀತು ಮಾಡಿದೆ.

ADVERTISEMENT

2015ರ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಸೇರಿದ್ದ ಸಮಿತಿ ಸಭೆಯ ಟಿಪ್ಪಣಿಗಳು ಸರ್ಕಾರದ ಮುಂದಿದ್ದರೂ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೇ ಬಂದಂತಿಲ್ಲ. ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ ₹12,228 ಕೋಟಿ ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿ ಹೇಳಿದೆ. ಆದರೆ, ಇದರಿಂದಾದ ಒಟ್ಟಾರೆ ನಷ್ಟ ₹ 1.43 ಲಕ್ಷ ಕೋಟಿಗೂ ಅಧಿಕ ಎಂದು ಪಾಟೀಲರ ಸಮಿತಿ ಅಂದಾಜಿಸಿದೆ.

ಬಳ್ಳಾರಿಯ ಹೊರಗಿರುವ ಆರು ರೈಲ್ವೆ ನಿಲ್ದಾಣ ಹಾಗೂ 14 ರೈಲ್ವೆ ಸೈಡಿಂಗ್‌ಗಳಿಂದ 2006ರಿಂದ 2010ರವರೆಗೆ 20
ಕೋಟಿ ಟನ್‌ ಅದಿರು ಸಾಗಣೆಯಾಗಿದೆ. ರೈಲ್ವೆ ಇಲಾಖೆಯ ದಾಖಲೆಗಳಿಂದ ಇದು ದೃಢಪಟ್ಟಿದೆ. ಇದಲ್ಲದೆ, 2009ರ ಸೆಪ್ಟೆಂಬರ್‌ನಿಂದ 2010ರ ಜೂನ್‌ವರೆಗೆ ಕೇವಲ 9 ತಿಂಗಳಲ್ಲಿ 14 ಕೋಟಿ ಟನ್‌ ಅದಿರನ್ನು ಟ್ರಕ್‌ಗಳಲ್ಲಿ ಅಕ್ರಮವಾಗಿ ಸಾಗಿಸಲಾಗಿದೆ. ಪ್ರತಿನಿತ್ಯ 20,000 ಟ್ರಕ್‌ಗಳು ಇದಕ್ಕೆ ಬಳಕೆಯಾಗಿವೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಅಕ್ರಮ ಗಣಿಗಾರಿಕೆಯಿಂದಾದ ನಷ್ಟ ವಸೂಲು ಮಾಡುವಂತೆ, ಸಂಬಂಧಪಟ್ಟ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಸಭೆ ನಡೆದು 4 ವರ್ಷ ಕಳೆದಿದ್ದರೂ ಕಿಂಚಿತ್ತೂ ಪ್ರಗತಿ ಆಗಿಲ್ಲ.

ಸಿಬಿಐ ತನಿಖೆ ನಡೆಸಿದ್ದ ಕೆಲವು ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ ಪ್ರಾಥಮಿಕ ಹಂತದಲ್ಲೇ ಕೈಬಿಡಲಾಗಿದೆ. 50 ಸಾವಿರ ಟನ್‌ಗಿಂತ ಕಡಿಮೆ ಪ್ರಮಾಣದಲ್ಲಿ ನಡೆದಿರುವ ಅಕ್ರಮ ಅದಿರು ಸಾಗಣೆ ಪ್ರಕರಣಗಳನ್ನು ರಾಜ್ಯ ಪೊಲೀಸ್‌ ವಿಶೇಷ ತನಿಖಾ ದಳ (ಎಸ್‌ಐಟಿ) ನಡೆಸುತ್ತಿದೆ. ಇದೂ ಆಮೆ ವೇಗದಲ್ಲಿ ಸಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.