ಬೆಂಗಳೂರು: ಈಶಾ ಫೌಂಡೇಷನ್ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ, ಒಡಿಶಾ ಸೇರಿ ಆರು ರಾಜ್ಯಗಳ 35 ಸಾವಿರ ಗ್ರಾಮಗಳಲ್ಲಿ ‘ಈಶಾ ಗ್ರಾಮೋತ್ಸವ’ ಆಯೋಜಿಸಿದೆ.
ಸದ್ಗುರು ಜಗ್ಗಿ ವಾಸುದೇವ್ ಅವರು ರೂಪಿಸಿರುವ ಈಶಾ ಗ್ರಾಮೋತ್ಸವವು ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾಗಿದ್ದು, ಕ್ರೀಡೆ ಮತ್ತು ಗ್ರಾಮೀಣ ಸಂಸ್ಕೃತಿಯ ಚೈತನ್ಯಪೂರ್ಣ ಪ್ರದರ್ಶನಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಶಕ್ತಿಶಾಲಿ ಮಾಧ್ಯಮವಾಗಿ ಹೊರಹೊಮ್ಮಿದೆ. ಗ್ರಾಮಸ್ಥರು ವ್ಯಸನಗಳಿಂದ ಮುಕ್ತರಾಗಲು, ಜಾತಿಯ ಗೋಡೆಗಳನ್ನು ಕೆಡವಲು, ಮಹಿಳಾ ಸಬಲೀಕರಣ ಮತ್ತು ಕ್ರೀಡೆಗಳನ್ನು ಉತ್ತೇಜಿಸಲು ಉತ್ಸವವನ್ನು ಬಳಸಿಕೊಳ್ಳಲಾಗುತ್ತಿದೆ.
ಈ ಕುರಿತು ಮಾತನಾಡಿದ ಸದ್ಗುರು, ‘ಈಶಾ ಗ್ರಾಮೋತ್ಸವವು ಕ್ರೀಡೆಯ ಮೂಲಕ ಜೀವನದ ಸಂಭ್ರಮಾಚರಣೆ. ಕ್ರೀಡೆಯು ಸಾಮಾಜಿಕ ವಿಭಜನೆಗಳನ್ನು ಮೀರಿ ಜನರನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ. ಇದು ಆಟದ ಆನಂದದ ಮೂಲಕ ಜಾತಿ, ಮತ ಮತ್ತು ಇತರ ಗುರುತುಗಳ ಗಡಿಗಳನ್ನು ಅಳಿಸಬಲ್ಲದು. ಜನರು ಉತ್ಸಾಹದಿಂದ ಚೆಂಡನ್ನು ಎಸೆಯಲು ಸಾಧ್ಯವಾದರೆ, ಆ ಚೆಂಡು ಜಗತ್ತನ್ನೇ ಬದಲಾಯಿಸಬಲ್ಲದು’ ಎಂದಿದ್ದಾರೆ.
ಈಶಾ ಔಟ್‌ರೀಚ್ ನೇತೃತ್ವದಲ್ಲಿ ನಡೆಯುವ ಕ್ರೀಡಾ ಉತ್ಸವದಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರು ಸೇರಿ 50,000ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಸ್ಪರ್ಧಿಸುತ್ತಿದ್ದಾರೆ. 5,000 ತಂಡಗಳನ್ನು ರಚಿಸಲಾಗಿದೆ. ರೈತರು, ಮೀನುಗಾರರು, ದಿನಗೂಲಿ ಕಾರ್ಮಿಕರು ಮತ್ತು ಗೃಹಿಣಿಯರು ಭಾಗವಹಿಸುತ್ತಿದ್ದಾರೆ. ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್‌ನಲ್ಲಿ ಸ್ಪರ್ಧೆಗಳನ್ನು ಮೂರು–ಹಂತದಲ್ಲಿ ನಡೆಸಲಾಗುತ್ತದೆ. ಕ್ಲಸ್ಟರ್, ವಿಭಾಗೀಯ ಪಂದ್ಯಗಳ ನಂತರ ಕೊಯಂಬತ್ತೂರಿನ ಈಶಾ ಯೋಗ ಕೇಂದ್ರದ ಆದಿಯೋಗಿಯ ಆವರಣದಲ್ಲಿ ಸೆ.21ರಂದು ಗ್ರಾಂಡ್ ಫೈನಲ್ ಪಂದ್ಯ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.