ADVERTISEMENT

ಗುಂಡಿನ ದಾಳಿ: ಆರೋಪಿ ಬಂಧನ

ಆನ್‌ಲೈನ್ ದೇಣಿಗೆ ಸಂಗ್ರಹಕ್ಕೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 1:13 IST
Last Updated 2 ಡಿಸೆಂಬರ್ 2019, 1:13 IST
ಅಭಿಷೇಕ್ ಸುದೇಶ್‌ ಭಟ್
ಅಭಿಷೇಕ್ ಸುದೇಶ್‌ ಭಟ್   

ಮೈಸೂರು: ಅಮೆರಿಕದ ಸ್ಯಾನ್ ಬರ್ನಾರ್ಡಿನೊದಲ್ಲಿ ಮೈಸೂರಿನ ಯುವಕ ಅಭಿಷೇಕ್ ಸುದೇಶ್‌ ಭಟ್ ಅವರನ್ನು ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಭಿಷೇಕ್ ಸಂಬಂಧಿ ರಾಮನಾಥ್ ತಿಳಿಸಿದ್ದಾರೆ.

‘ಆರೋಪಿಯು ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿಲ್ಲ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಬಂಧನ ನಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಲ್ಲಿನ ಪೊಲೀಸರು ದೂರವಾಣಿ ಮೂಲಕ ತಿಳಿಸಿರುವುದಾಗಿ ಹೇಳಿದ್ದಾರೆ.

ಆದರೆ, ಆರೋಪಿಯು ಸ್ಯಾನ್‌ ಬರ್ನಾರ್ಡಿನೊ ಪಟ್ಟಣದ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಅಮೆರಿಕದ ವೆಬ್‌ಸೈಟ್‌ ktla.com ವರದಿ ಮಾಡಿದೆ.

ADVERTISEMENT

‘ಆರೋಪಿಯನ್ನು ಎರಿಕ್ ಡೆವೊನ್ ಟರ್ನರ್ (42) ಎಂದು ಗುರುತಿಸಲಾಗಿದೆ. ಈತನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂಬ ಸ್ಥಳೀಯ ಪೊಲೀಸ್ ಅಧಿಕಾರಿ ಆಲ್ಬರ್ಟ್ ಟೆಲೊ ಅವರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.

ಅಭಿಷೇಕ್ ಅವರ ಪೋಷಕರ ವೀಸಾ ಸಮಸ್ಯೆ ಬಗೆಹರಿಯದ ಕಾರಣ ಅಮೆರಿಕಕ್ಕೆ ತೆರಳಲು ಭಾನುವಾರವೂ ಸಾಧ್ಯವಾಗಿಲ್ಲ.

ಸಹಾಯಕ್ಕೆ ಉತ್ತಮ ಸ್ಪಂದನೆ: ಅಭಿಷೇಕ್ ಪೋಷಕರ ಅಮೆರಿಕ ಪ್ರಯಾಣದ ವೆಚ್ಚಕ್ಕಾಗಿ ವರುಣ್ ಕೃಷ್ಣ ಹಾಗೂ ಶ್ರೀವತ್ಸ ಭಟ್‌ ಎಂಬುವವರು ವೆಬ್‌ಸೈಟ್‌ನಲ್ಲಿ ದೇಣಿಗೆ ಸಂಗ್ರಹ ಆರಂಭಿಸಿದ್ದಾರೆ. ‘ಗೊಫಂಡ್‌ಮಿ’ ವೆಬ್‌ಸೈಟ್‌ನಲ್ಲಿ ಅಭಿಷೇಕ್ ಅವರ ಚಿತ್ರ ಹಾಗೂ ದುರಂತದ ವಿವರಗಳನ್ನು ಹಾಕಲಾಗಿದೆ.

70 ಸಾವಿರ ಡಾಲರ್‌ (ಅಂದಾಜು ₹ 50 ಲಕ್ಷ) ದೇಣಿಗೆ ಸಂಗ್ರಹದ ಗುರಿ ಹೊಂದಲಾಗಿದ್ದು, 18 ಗಂಟೆಗಳಲ್ಲಿ ಇದಕ್ಕೆ 848 ಮಂದಿ ಧನಸಹಾಯ ಮಾಡಿದ್ದಾರೆ. ಈಗಾಗಲೇ 33,771 ಡಾಲರ್ (ಅಂದಾಜು ₹ 24 ಲಕ್ಷ) ಹಣ ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.