ADVERTISEMENT

ಕಿಯೋನಿಕ್ಸ್‌ನಲ್ಲಿ ₹450 ಕೋಟಿ ಅಕ್ರಮ: ಸಿಎಜಿ ವರದಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
   

ಬೆಂಗಳೂರು: ಹಿಂದಿನ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್‌ ಸಂಸ್ಥೆಯಲ್ಲಿ ನಡೆದ ಖರೀದಿ ವಹಿವಾಟಿನಲ್ಲಿ ₹450 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ನಡೆದಿದೆ ಎಂಬುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಮಾಹಿತಿ ತಂತ್ರಜ್ಞಾನ ಉಪಕರಣಗಳಿಗೆ ಮೀಸಲಾದ ಹಣದಲ್ಲಿ ಕಿಯೋನಿಕ್ಸ್‌ ಚಪಾತಿ ಮಾಡುವ ಯಂತ್ರ, ತೊಳೆಯುವ ಮಷಿನ್‌ಗಳನ್ನೂ ಖರೀದಿಸಿದೆ ಎಂಬ ವಿವರ ಸಿಎಜಿ ಸಲ್ಲಿಸಿರುವ, ‘ರಾಜ್ಯ ಸಾರ್ವಜನಿಕ ವಲಯ ಉದ್ದಿಮೆಗಳ ಮೇಲಿನ ವರದಿ’ಯಲ್ಲಿ ಈ ಮಾಹಿತಿ ಇದೆ. 2018–19ರಿಂದ 2022–23ರ ನಡುವೆ ಕಿಯೋನಿಕ್ಸ್‌ನ ಲೆಕ್ಕಪತ್ರಗಳ ಪರಿಶೀಲಿಸಿ ಸಿಎಜಿ ಈ ವರದಿ ನೀಡಿದೆ.

‘ರಾಜ್ಯ ಸರ್ಕಾರದ, ರಾಜ್ಯ ಸರ್ಕಾರದ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ಉಪಕರಣಗಳ ಖರೀದಿ, ಸರಬರಾಜು, ನಿರ್ವಹಣೆ, ಮತ್ತು ಐ.ಟಿ ಸೇವೆಯನ್ನು ಒದಗಿಸುವ ಹೊಣೆಗಾರಿಕೆ ಕಿಯೋನಿಸ್ಕ್‌ನದ್ದು. ಆದರೆ ಈ ಅವಧಿಯಲ್ಲಿ ಕಿಯೋನಿಸ್ಕ್‌ 405 ಖರೀದಿ ಆದೇಶಗಳಲ್ಲಿ ಐ.ಟಿಯೇತರ ಉಪಕರಣಗಳನ್ನು ಖರೀದಿಸಿದೆ. ಇದು ಅಕ್ರಮ’ ಎಂದು ಸಿಎಜಿ ವಿವರಿಸಿದೆ.

ADVERTISEMENT

‘ಈ ಖರೀದಿ ಆದೇಶಗಳ ಮೂಲಕ ಕಿಯೋನಿಸ್ಕ್‌ ₹255.17 ಕೋಟಿ ಮೌಲ್ಯದ ಚಪಾತಿ ಯಂತ್ರಗಳು, ಬಟ್ಟೆ/ಪಾತ್ರೆ ತೊಳೆಯುವ ಯಂತ್ರಗಳು, ಹೈಮಾಸ್ಟ್‌ ದೀಪಗಳು, ಸೌರಶಕ್ತಿ ದೀಪಗಳು, ಆರ್‌.ಒ ನೀರು ಶುದ್ಧೀಕರಣ ಯಂತ್ರಗಳನ್ನು ಖರೀದಿಸಿ, ಸರ್ಕಾರದ ವಿವಿಧ ಇಲಾಖೆ ಮತ್ತು ಸಂಸ್ಥೆಗಳಿಗೆ ಪೂರೈಸಿದೆ. ಆದರೆ ಇದು ಪೂರ್ಣ ಅಕ್ರಮ’ ಎಂದು ಹೇಳಿದೆ.

‘ಜತೆಗೆ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಇಲಾಖೆಗಳಿಗೆ ಐ.ಟಿ ಉಪಕರಣ ಮತ್ತು ಸೇವೆ ಪೂರೈಸುವಲ್ಲಿ ₹47.97 ಕೋಟಿಯಷ್ಟು ಅಕ್ರಮ ನಡೆದಿದೆ. ಕುವೆಂಪು ವಿಶ್ವವಿದ್ಯಾಲಯಕ್ಕೆ ಸ್ಮಾರ್ಟ್‌ ತರಗತಿಗಳ ನಿರ್ಮಾಣ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಡಿಜಿಟಲ್‌ ತರಗತಿ ಸ್ಥಾಪನೆ, ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯ ಸ್ಥಾಪನೆ ಮಾಡುವಲ್ಲಿ ಈ ಅಕ್ರಮ ನಡೆದಿದೆ. ಈ ಎಲ್ಲವುಗಳ ಮಾರುಕಟ್ಟೆ ಬೆಲೆ₹27.84ಕೋಟಿಯಷ್ಟಾಗುತ್ತದೆ. ಆದರೆ ಕಿಯೋನಿಸ್ಕ್‌ ₹75.81 ಕೋಟಿ ಪಾವತಿಸಿದೆ’ ಎಂದು ಸಿಎಜಿ ಹೇಳಿದೆ.

‘₹1 ಕೋಟಿಗಿಂತ ಕಡಿಮೆ ಮೊತ್ತದ ಖರೀದಿ ಆದೇಶಗಳ ಸಂದರ್ಭದಲ್ಲಿ ಮಾತ್ರ ಟೆಂಡರ್‌ ಕರೆಯದೆ ಗುತ್ತಿಗೆ ನೀಡಬಹುದಾಗಿದೆ. ಈ ವಿನಾಯತಿಯನ್ನು ದುರ್ಬಳಕೆ ಮಾಡಿಕೊಳ್ಳಲು ₹154.4 ಕೋಟಿ ಮೊತ್ತದ ಗುತ್ತಿಗೆಯನ್ನು ₹1 ಕೋಟಿಗೂ ಕಡಿಮೆ ಮೊತ್ತದ 195 ಖರೀದಿ ಆದೇಶಗಳಾಗಿ ವಿಭಜಿಸಿ, ಅಕ್ರಮ ಎಸಗಲಾಗಿದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.