ADVERTISEMENT

ಪ್ರವಾಹ: ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 16:00 IST
Last Updated 7 ಆಗಸ್ಟ್ 2019, 16:00 IST
   

ಬೆಳಗಾವಿ: ‘ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಾಗೂ ಭೀಕರ ಪ್ರವಾಹದಿಂದ ಮೃತಪಟ್ಟಿರುವ 6 ಜನರಿಗೆ ತಕ್ಷಣ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದರು.

ಇಲ್ಲಿ ಬುಧವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರೆ ಹಾವಳಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಅಧಿಕಾರಿಗಳು ಎಲ್ಲ ಪ್ರಯತ್ನ ಕೈಗೊಳ್ಳುತ್ತಿದ್ದಾರೆ. ಅಗತ್ಯಬಿದ್ದರೇ ಮೂರು ದಿನಗಳವರೆಗೆ ನಾನು ಇಲ್ಲಿಯೇ ವಾಸ್ತವ್ಯ ಹೂಡಿ, ಪರಿಹಾರ ಕಾಮಗಾರಿಗಳನ್ನು ಖುದ್ದು ಪರಿಶೀಲಿಸುತ್ತೇನೆ’ ಎಂದು ಹೇಳಿದರು.

‘ಪ್ರವಾಹ ಸಂದರ್ಭದಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸುತ್ತಿದ್ದಾಗ ಕಾರು ಡಿಕ್ಕಿಯಲ್ಲಿ ಮೃತಪಟ್ಟ ಪಿಎಸ್‌ಐ ವೀರಣ್ಣ ಲಟ್ಟೆ ಅವರ ಕುಟುಂಬಕ್ಕೆ ಸರ್ಕಾರದಿಂದ ₹ 30 ಲಕ್ಷ ಹಾಗೂ ವಿಪತ್ತು ಪರಿಹಾರ ನಿಧಿಯಿಂದ ₹ 20 ಲಕ್ಷ ಪರಿಹಾರ ಕೊಡಲಾಗುವುದು. ಅವರ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ರಾಷ್ಟ್ರೀಯ ವಿಕೋಪ ಪರಿಹಾರ ಪಡೆಯ (ಎನ್‌ಡಿಆರ್‌ಎಫ್‌) ಹಾಗೂ ಸೇನೆಯ ತಲಾ 4 ತುಕಡಿಗಳು ಬರಲಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದು, ಅಗತ್ಯ ನೆರವು ನೀಡುವಂತೆ ಕೋರಿದ್ದೇನೆ’ ಎಂದು ಹೇಳಿದರು.

‘ಇದೇ ತಿಂಗಳ 11ರಂದು ಸಂಪುಟ ರಚಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.