ADVERTISEMENT

50 ಸಾವಿರ ಚರ್ಮ ಕುಶಲಕರ್ಮಿಗಳಿಗೆ ನೆರವು

ಮುಖ್ಯಮಂತ್ರಿ ನಿರ್ಧಾರಕ್ಕೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:10 IST
Last Updated 3 ಜೂನ್ 2021, 17:10 IST

ಚಿತ್ರದುರ್ಗ: ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 50 ಸಾವಿರ ‘ಚರ್ಮ ಕುಶಲಕರ್ಮಿ’ಗಳಿಗೆ ತಲಾ ₹ 2 ಸಾವಿರ ನೆರವು ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹ 10 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಾದ್ಯಂತ ರಸ್ತೆ ಬದಿ, ಹೋಟೆಲ್, ಬಸ್ ನಿಲ್ದಾಣ ಸೇರಿ ಇತರ ಪ್ರದೇಶಗಳಲ್ಲಿ ಚರ್ಮಗಾರಿಕೆಯಲ್ಲಿ ತೊಡಗಿ ಪಾದರಕ್ಷೆ, ಚರ್ಮ ವಸ್ತುಗಳ ದುರಸ್ತಿ, ಪಾಲಿಷ್ ಮಾಡುವ ಕಾಯಕದಲ್ಲಿ ತೊಡಗಿರುವ ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ತಾತ್ಕಾಲಿಕ ಪರಿಹಾರ ಘೋಷಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ಲಾಕ್‌ಡೌನ್‌ನಿಂದಾಗಿ ಇವರೆಲ್ಲ ತೊಂದರೆಗೆ ಒಳಗಾಗಿದ್ದರು. ಅದಕ್ಕಾಗಿ ಆರ್ಥಿಕ ನೆರವು ನೀಡುವಂತೆ ಈಚೆಗಷ್ಟೇ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಹಾಯಧನ ಬಿಡುಗಡೆ ಮಾಡಿದ್ದಾರೆ. ಇದರಿಂದ ಈ ಸಮುದಾಯಕ್ಕೆ ಒಂದಿಷ್ಟು ಅನುಕೂಲವಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

15ರೊಳಗೆ ಅರ್ಜಿ ಸಲ್ಲಿಸಬೇಕು: ಪಾರದರ್ಶಕವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ಜಮಾ ಮಾಡಲು ಸೇವಾ ಸಿಂಧು ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಸಲ್ಲಿಸಲು ಜೂನ್ 15ರವರೆಗೂ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.