ADVERTISEMENT

₹5,000 ಕೋಟಿ ಮೊತ್ತದ ಬಿಲ್‌ ಪಾವತಿ: ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 14:38 IST
Last Updated 19 ಏಪ್ರಿಲ್ 2022, 14:38 IST
   

ಬೆಂಗಳೂರು: ಎಚ್‌.ಸಿ.ಮಹದೇವಪ್ಪ ಸಚಿವರಾಗಿದ್ದ ಕಾಲದಿಂದ ಲೋಕೋಪಯೋಗಿ ಇಲಾಖೆಯಲ್ಲಿ ಒಟ್ಟು ₹4,000 ಕೋಟಿ ಬಿಲ್‌ ಬಾಕಿ ಇತ್ತು. ಆ ಮೊತ್ತವೂ ಸೇರಿ ಈವರೆಗೆ ₹5,000 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನಗಿಂತ ಹಿಂದೆ 5–6 ಲೋಕೋಪಯೋಗಿ ಸಚಿವರು ಇದ್ದರು. ಇವರು ಹಾಸಿಗೆ ಇದ್ದಷ್ಟು ಕಾಲು ಚಾಚದೇ ಇದ್ದ ಪರಿಣಾಮ ₹4,000 ಕೋಟಿ ಬಾಕಿ ಉಳಿಸಿ ಹೋಗಿದ್ದರು. ಅದನ್ನು ನಾವು ತೀರಿಸಿದ್ದೇವೆ’ ಎಂದು ತಿಳಿಸಿದರು.

ಎಸ್‌ಎಚ್‌ಡಿಪಿ ಜಾರಿ:

ADVERTISEMENT

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎಸ್‌ಎಚ್‌ಡಿಪಿ) 4 ನೇ ಹಂತದ ಯೋಜನೆಯನ್ನು ಒಟ್ಟು 3 ಘಟ್ಟಗಳಲ್ಲಿ ಜಾರಿ ಮಾಡಲಾಗುತ್ತಿದ್ದು, ಇದಕ್ಕಾಗಿ ₹10,000 ಕೋಟಿ ಬೇಕಾಗುತ್ತದೆ. ಘಟ್ಟ 1 ರಡಿ ₹4,500 ಕೋಟಿ ಮೊತ್ತದಲ್ಲಿ 3,461 ಕಿ.ಮೀ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಇದರಲ್ಲಿ ಈಗಾಗಲೇ ₹2,630 ಕೋಟಿ ವೆಚ್ಚದಲ್ಲಿ 2,593 ಕಿ.ಮೀ ಪೂರ್ಣಗೊಳಿಸಲಾಗಿದೆ ಎಂದರು.

ಘಟ್ಟ 2 ರ ಅಡಿ ₹3,500 ಕೋಟಿ ವೆಚ್ಚದಲ್ಲಿ 2,275 ಕಿ.ಮೀ ಹೆದ್ದಾರಿಗಳ ಅಭಿವೃದ್ಧಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ವಾಸಿಸುವ ಕಾಲೋನಿಗಳಲ್ಲಿ ಕಾಂಕ್ರೀಟ್‌ ರಸ್ತೆಗಳ ನಿರ್ಮಾಣವನ್ನು ₹985 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಇದಕ್ಕಾಗಿ ಈಗಾಗಲೇ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಿದ್ದು, ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ ಎಂದು ಪಾಟೀಲ ಹೇಳಿದರು.

ನಬಾರ್ಡ್‌ ಸಂಸ್ಥೆಯಿಂದ ಆರ್‌ಐಡಿಎಫ್‌–27 ರಡಿ ₹143 ಕೋಟಿ ವೆಚ್ಚದಲ್ಲಿ 23 ಬೃಹತ್‌ ಮತ್ತು ಮಧ್ಯಮ ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿದೆ. ಮಲೆನಾಡು, ಕರಾವಳಿ ಮತ್ತು ಒಳನಾಡು ಭಾಗಗಳಲ್ಲಿ ‘ಗ್ರಾಮಬಂಧು ಸೇತು’ ಕಾರ್ಯಕ್ರಮದಡಿ 1,335 ಕಾಲು ಸೇತುವೆಗಳ ನಿರ್ಮಾಣವನ್ನು ₹200 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ನಬಾರ್ಡ್‌ ಸಹಯೋಗದಲ್ಲಿ 3,370 ಪ್ರಾಥಮಿಕ ಮತ್ತು ಪ್ರೌಢಶಾಲಾ ಕಟ್ಟಡಗಳ ನಿರ್ಮಾಣ ಕೈಗೆತ್ತಿಕೊಂಡಿದ್ದು, 2,845 ಕಟ್ಟಡಗಳು ಪೂರ್ಣಗೊಂಡಿವೆ. 834 ಅಂಗನವಾಡಿ ಕಟ್ಟಡಗಳ ಪೈಕಿ 593 ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.