ADVERTISEMENT

ಬಂಟ್ವಾಳದಲ್ಲಿ ಇಬ್ಬರ ಬಂಧನ

ವಾಟ್ಸ್‌ ಆ್ಯಪ್‌ನಲ್ಲಿ ಮತೀಯ ದ್ವೇಷ ಬಿತ್ತಲು ಯತ್ನ, ಮಹಿಳೆಗೆ ಅವಮಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST

ಮಂಗಳೂರು: ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ‘ಐ ಲವ್‌ ಮುಸ್ಲಿಮ್ಸ್‌’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ಸಿಪಿಐ ಮಹಿಳಾ ಸಂಘಟನೆ ನಾಯಕಿ ಭಾರತಿ ಮತ್ತು ಮುಸ್ಲಿಮರನ್ನು ಅವಹೇಳನ ಮಾಡಿ, ಮತೀಯ ದ್ವೇಷ ಬಿತ್ತುವ ಸಂದೇಶಗಳನ್ನು ವಾಟ್ಸ್‌ ಆ್ಯಪ್‌ ಗುಂಪುಗಳಲ್ಲಿ ರವಾನೆ ಮಾಡಿದ ಇಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಕೆಎಸ್‌ಆರ್‌ಟಿಸಿ ಚಾಲಕರಾಗಿರುವ ಉಪ್ಪಿನಂಗಡಿ ನಿವಾಸಿ ಬಾಲಕೃಷ್ಣ ಪೂಜಾರಿ ಮತ್ತು ವಾಟ್ಸ್‌ ಆ್ಯಪ್‌ ಗುಂಪೊಂದರ ‘ಅಡ್ಮಿನ್‌’ ಕೂಡ ಆಗಿದ್ದ ಬಂಟ್ವಾಳ ತಾಲ್ಲೂಕಿನ ಇರಾ ನಿವಾಸಿ ಸತೀಶ್ ಬಂಧಿತರು. ಭಾರತಿ ನೀಡಿದ್ದ ದೂರನ್ನು ಆಧರಿಸಿ ತನಿಖೆ ನಡೆಸಿದ ಬಂಟ್ವಾಳ ನಗರ ಠಾಣೆ ಪೊಲೀಸರು ಇಬ್ಬರನ್ನೂ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ' ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಭಾರತಿ ಫೇಸ್‌ ಬುಕ್‌ ಖಾತೆಯಲ್ಲಿ ‘ಐ ಲವ್‌ ಮುಸ್ಲಿಮ್ಸ್‌’ ಎಂಬ ಪ್ರತಿಕ್ರಿಯೆ ಹಾಕಿದ್ದರು. ಬಳಿಕ ಫೇಸ್‌ ಬುಕ್‌ ಖಾತೆಯಿಂದ ಅವರ ಚಿತ್ರವನ್ನು ಡೌನ್‌ ಲೋಡ್‌ ಮಾಡಿದ್ದ ಆರೋಪಿಗಳು, ಅವಹೇಳನಕಾರಿ ಸಂದೇಶವನ್ನು ಅದರೊಂದಿಗೆ ಸೇರಿಸಿದ್ದರು. ಮಹಿಳೆ ಮತ್ತು ಮುಸ್ಲಿಂ ಧರ್ಮೀಯರನ್ನು ಅವಮಾನಿಸುವಂತಹ ಬರಹ ಅದರಲ್ಲಿತ್ತು. ಮೌರಿ ಮತ್ತು ಪಣೋಲಿಬೈಲ್‌ ಎಂಬ ವಾಟ್ಸ್‌ ಆ್ಯಪ್‌ ಗುಂಪುಗಳಲ್ಲಿ ಈ ಸಂದೇಶವನ್ನು ಹರಿಯಬಿಡಲಾಗಿತ್ತು.

ADVERTISEMENT

ಆರೋಪಿಗಳ ವಿರುದ್ಧ ಮತೀಯ ದ್ವೇಷ ಬಿತ್ತಲು ಯತ್ನಿಸಿರುವುದು, ಶಾಂತಿ ಕದಡುವ ಉದ್ದೇಶದಿಂದ ನಿಂದನೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.