ADVERTISEMENT

ಗೌರಿ ಹತ್ಯೆ: ಸಿಬಿಐ ತನಿಖೆಗೆ ಒತ್ತಾಯ

ಹೈಕೋರ್ಟ್‌ ಮೊರೆ ಹೋಗಲು ಇಂದ್ರಜಿತ್‌ ಲಂಕೇಶ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ಗೌರಿ ಸಮಾಧಿ ಎದುರು ಇಂದ್ರಜಿತ್ ಲಂಕೇಶ್ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಗೌರಿ ಸಮಾಧಿ ಎದುರು ಇಂದ್ರಜಿತ್ ಲಂಕೇಶ್ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗೌರಿ ಹತ್ಯೆಯಾಗಿ ಐದು ತಿಂಗಳು ಕಳೆದರೂ ತನಿಖೆಯಲ್ಲಿ ಪ್ರಗತಿ ಆಗಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಹೈಕೋರ್ಟ್‌ ಮೊರೆ ಹೋಗುತ್ತೇನೆ’ ಎಂದು ಸಹೋದರ ಇಂದ್ರಜಿತ್‌ ಲಂಕೇಶ್‌ ತಿಳಿಸಿದರು.

ಸಮಾಧಿ ಬಳಿ ಸೋಮವಾರ ಹಮ್ಮಿಕೊಂಡಿದ್ದ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕವಿತಾ ಲಂಕೇಶ್‌ ನಿಲುವು ಏನು ಎಂಬುದು ನನಗೆ ಗೊತ್ತಿಲ್ಲ. ಗೌರಿ ಹತ್ಯೆಗೆ ಕಾರಣ ತಿಳಿಯಬೇಕು ಹಾಗೂ ಹಂತಕರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಆಶಯ’ ಎಂದು ವಿವರಿಸಿದರು.

ADVERTISEMENT

ಏಕಮುಖ ತನಿಖೆ: ‘ಹೆಲ್ಮೆಟ್‌ ಧರಿಸಿ, ಕುಂಕುಮ ಇಟ್ಟಿದ್ದವನ ರೇಖಾಚಿತ್ರ ಬಿಡುಗಡೆಯಾದಾಗಲೇ, ತನಿಖೆ ಏಕಮುಖವಾಗಿ ಸಾಗುತ್ತಿದೆ ಎಂದು ತಿಳಿಯಿತು.ಅಮ್ಮನ ಒತ್ತಾಯಕ್ಕೆ ಇಷ್ಟು ದಿನ ಸುಮ್ಮನಿದ್ದೆ. ಇನ್ನೂ ಕಾಯಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಕ್ಕನ ಸಾವಿನ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ರಾಜಕೀಯ ಮಾಡುತ್ತಿದೆ. ಸಮಗ್ರವಾಗಿ ತನಿಖೆ ನಡೆಸಲು ಎಸ್‌ಐಟಿಗೆ ಸ್ವಾತಂತ್ರ್ಯ ನೀಡುತ್ತಿಲ್ಲ. ಒತ್ತಡಗಳು ಹೆಚ್ಚಾದಾಗ ಜನರ ದೃಷ್ಟಿ ಬೇರೆಡೆ ಸೆಳೆಯಲು ಗೌರಿ ಹಂತಕರನ್ನು ಹಿಡಿಯಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಒಂದು ವೇಳೆ ಹಂತಕರನ್ನು ಹಿಡಿದಿದ್ದರೆ, ಬಹಿರಂಗಪಡಿಸಲಿ’ ಎಂದು ಒತ್ತಾಯಿಸಿದರು.

ಹೋರಾಟ ಸಭೆಯಲ್ಲಿ ಮುಜುಗರ: ‘ಗೌರಿ ಹತ್ಯೆ ಖಂಡಿಸಿ ಈ ಹಿಂದೆ ನಡೆದಿದ್ದ ಹೋರಾಟ ಸಭೆಯಲ್ಲಿ ನನಗೆ ಮುಜುಗರ ಉಂಟಾಗಿತ್ತು. ಅದು ಸರ್ಕಾರದ ಪ್ರಾಯೋಜಕತ್ವದ ಸಭೆಯಂತೆ ಇತ್ತು. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಆ ಕಾರ್ಯ
ಕ್ರಮದ ಮೇಲ್ವಿಚಾರಣೆ ನಡೆಸಿದ್ದರು. ಪುರಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮವೂ ಸಿದ್ದರಾಮಯ್ಯ ಅವರ ಪ್ರಾಯೋಜಕತ್ವದಲ್ಲಿಯೇ ನಡೆದಿದೆ. ನನಗೆ ಆಹ್ವಾನ ಇಲ್ಲ, ಹೋಗಲೂ ಇಷ್ಟ ಇಲ್ಲ’ ಎಂದು ತಿಳಿಸಿದರು.

ಹೋರಾಟಗಾರರಿಗೆ ಸರ್ಕಾರದ ಪ್ರಾಯೋಜಕತ್ವ: ‘ಹೋರಾಟ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿರುವ ಜಿಗ್ನೇಶ್ ಮೇವಾನಿ ಹಾಗೂ ಕನ್ಹಯ್ಯ ಕುಮಾರ್‌ ಅವರ ವಿಮಾನ ಟಿಕೆಟ್‌ ಹಣವನ್ನು ಸರ್ಕಾರವೇ ಭರಿಸಿದೆ. ದಲಿತ ನಾಯಕ ಎಂದುಕೊಳ್ಳುವ ಜಿಗ್ನೇಶ್‌ ಅವರು ವಿಜಯಪುರದ ದಾನಮ್ಮನ ಅಂತಿಮ ದರ್ಶನ ಪಡೆಯಲ್ಲ’ ಎಂದರು.

ಸಿಬಿಐಗೆ ಬೇಡ: ಕವಿತಾ

‘ಪ್ರಕರಣದ ತನಿಖೆ ಕೊನೆಯ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವುದರಲ್ಲಿ ಅರ್ಥವಿಲ್ಲ’ ಎಂದು ಸಹೋದರಿ ಕವಿತಾ ಲಂಕೇಶ್‌ ತಿಳಿಸಿದರು.

‘ತನಿಖೆಯ ಪ್ರಗತಿ ಬಗ್ಗೆ ನನಗೆ ಹಾಗೂ ಅಮ್ಮನಿಗೆ ಎಸ್‌ಐಟಿ ಪ್ರತಿ ವಾರ ವರದಿ ನೀಡುತ್ತಿದೆ. ತನಿಖೆ ಬಹುತೇಕ ಪೂರ್ಣಗೊಂಡಿದೆ. ಹಂತಕರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದೆಂದು, ಇನ್ನೂ ನಿಖರತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಂತದಲ್ಲಿ ಸಿಬಿಐಗೆ ವಹಿಸಿದರೆ, ಎಸ್‌ಐಟಿ ಇಷ್ಟು ದಿನ ಮಾಡಿದ ಶ್ರಮ ವ್ಯರ್ಥವಾಗುತ್ತದೆ’ ಎಂದರು.

‘ಸಿಬಿಐಗೆ ವಹಿಸಿರುವ ಸುಮಾರು 12 ಪ್ರಕರಣಗಳು ಇನ್ನೂ ಇತ್ಯರ್ಥವಾಗಿಲ್ಲ. ಎಸ್‌ಐಟಿ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.