ADVERTISEMENT

ಕಲಿಕೆ: 8 ಲಕ್ಷ ವಿದ್ಯಾರ್ಥಿಗಳು ಹಿಂದೆ

ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಕಲಿಕೆ: 8 ಲಕ್ಷ ವಿದ್ಯಾರ್ಥಿಗಳು ಹಿಂದೆ
ಕಲಿಕೆ: 8 ಲಕ್ಷ ವಿದ್ಯಾರ್ಥಿಗಳು ಹಿಂದೆ   

ಬೆಂಗಳೂರು: ಸರ್ಕಾರಿ ಶಾಲೆಯ 8 ಲಕ್ಷ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿರುವ ಸಂಗತಿ ಶಿಕ್ಷಣ ಇಲಾಖೆ ನಡೆಸಿದ ‘ವಿದ್ಯಾರ್ಥಿಗಳ ಸಮಗ್ರ ಮೌಲ್ಯಾಂಕನ ಸಮೀಕ್ಷೆ’ಯಿಂದ ಬಹಿರಂಗವಾಗಿದೆ.

ರಾಜ್ಯದ 50 ಸಾವಿರ ಶಾಲೆಗಳ 4 ರಿಂದ 9ನೇ ತರಗತಿವರೆಗಿನ 36 ಲಕ್ಷ ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್ ನೀಡಿ ವಿಷಯಾಧಾರಿತ ಪರೀಕ್ಷೆ ನಡೆಸಲಾಗಿದ್ದು, ಶೇ 35ಕ್ಕಿಂತ ಕಡಿಮೆ ಅಂಕ ಪಡೆದವರನ್ನು ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚು ಮಕ್ಕಳು ಹಿಂದುಳಿದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ದೇ‌ಶದಲ್ಲೆ ಮೊದಲ ಬಾರಿಗೆ ಮೌಲ್ಯಾಂಕನ ಸಮೀಕ್ಷೆ ನಡೆಸಲಾಗಿದೆ. ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ತರಬೇತಿ ನೀಡಲು ವಿಶೇಷ ತರಗತಿಗಳನ್ನು ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

ಅಂಕಪಟ್ಟಿಯಲ್ಲಿ ‘ಸ್ಟಾರ್’:‌ ಸರ್ಕಾರಿ ಶಾಲೆಗಳಲ್ಲಿ ಅಂಕಪಟ್ಟಿ ನೀಡದ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂಬ ಅಂಶ ಸಮೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ ಅಂಕಪಟ್ಟಿ ನೀಡಲಾಗುತ್ತಿದೆ ಎಂದೂ ಅವರು ವಿವರಿಸಿದರು.

ಅಂಕಪಟ್ಟಿಗಳಲ್ಲಿ ಅಂಕಗಳ ಜೊತೆಗೆ ‘ಸ್ಟಾರ್’ಗಳನ್ನು ನಮೂದಿಸಲಾಗಿದೆ. ಶೇ 35ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಒಂದು ಸ್ಟಾರ್, ಅದಕ್ಕೂ ಹೆಚ್ಚು ಅಂಕಗಳನ್ನು ಪಡೆದವರಿಗೆ ಕ್ರಮವಾಗಿ ಎರಡು, ಮೂರು, ನಾಲ್ಕು ಮತ್ತು ಐದು ಸ್ಟಾರ್‌ಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಚಿನ್ನದ ಬಣ್ಣದ ಸ್ಟಾರ್, ಬೆಳ್ಳಿ ಬಣ್ಣದ ಸ್ಟಾರ್ ಮತ್ತು ಕಂಚಿನ ಬಣ್ಣದ ಸ್ಟಾರ್‌ಗಳನ್ನು ನಮೂದಿಸಲು ಉದ್ದೇಶಿಸಲಾಗಿದೆ. ಕಡಿಮೆ ಸ್ಟಾರ್‌ ಪಡೆದಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಸ್ಟಾರ್ ಅಥವಾ ಚಿನ್ನದ ಬಣ್ಣವಿರುವ ಸ್ಟಾರ್‌ಗಾಗಿ ಸ್ಪರ್ಧೆ ನಡೆಸಲು ಇದು ಅನುಕೂಲವಾಗಲಿದೆ ಎಂದರು.

ಪೋಷಕರನ್ನು ಶಾಲೆಗಳಿಗೆ ಕರೆಸಿ ಅಂಕಪಟ್ಟಿ ನೀಡಿ ಮಗು ಯಾವ ವಿಷಯದಲ್ಲಿ ಹಿಂದಿದೆ ಎಂಬುದನ್ನು ವಿವರಿಸಲಾಗುತ್ತದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.