ADVERTISEMENT

ರಾಜ್ಯದ 58 ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ಚುನಾವಣೆ

ಚುನಾವಣೆ ನಡೆಯಲಿರುವ ಸಂಸ್ಥೆಗಳಲ್ಲಿ ಡಿ.8ರಿಂದ ನೀತಿ ಸಂಹಿತೆ ಜಾರಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 19:41 IST
Last Updated 29 ನವೆಂಬರ್ 2021, 19:41 IST
ಚುನಾವಣೆ
ಚುನಾವಣೆ    

ಬೆಂಗಳೂರು: ಐದು ನಗರಸಭೆಗಳೂ ಸೇರಿದಂತೆ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳ 1,185 ವಾರ್ಡ್‌ಗಳ ಪ್ರತಿನಿಧಿಗಳ ಆಯ್ಕೆಗೆ ಡಿಸೆಂಬರ್‌ 27ರಂದು ಚುನಾವಣೆ ನಡೆಯಲಿದೆ.

19 ಪುರಸಭೆಗಳು ಮತ್ತು 34 ಪಟ್ಟಣ ಪಂಚಾಯಿತಿಗಳಿಗೂ ಚುನಾವಣೆ ಘೋಷಣೆಯಾಗಿದೆ. ಅದರ ಜತೆಯಲ್ಲೇ ವಿವಿಧ ಕಾರಣಗಳಿಂದ ತೆರವಾಗಿರುವ ನಗರಸಭೆಗಳ ಐದು ವಾರ್ಡ್‌ಗಳು, ಪುರಸಭೆಗಳ ಮೂರು ಮತ್ತು ಪಟ್ಟಣ ಪಂಚಾಯಿತಿಯ ಒಂದು ವಾರ್ಡ್‌ಗಳಿಗೂ ಅದೇ ದಿನ ಉಪಚುನಾವಣೆ ನಡೆಯಲಿದೆ.

ಚಿಕ್ಕಮಗಳೂರು, ಗದಗ–ಬೆಟಗೇರಿ, ಹೊಸಪೇಟೆ, ಶಿರಾ ನಗರಸಭೆಗಳು ಹಾಗೂ ಅಥಣಿ, ಅಣ್ಣಿಗೇರಿ ಮತ್ತು ಬಂಕಾಪುರ ಪುರಸಭೆಗಳ ಚುನಾಯಿತ ಸದಸ್ಯರ ಅಧಿಕಾರ ಅವಧಿ 2019ರ ಮಾರ್ಚ್‌ನಲ್ಲಿ ಅಂತ್ಯಗೊಂಡಿತ್ತು. ಉಳಿದ 51 ಸ್ಥಳೀಯ ಸಂಸ್ಥೆಗಳ ಸದಸ್ಯರ ಅವಧಿ ಈ ವರ್ಷದ ವಿವಿಧ ತಿಂಗಳಲ್ಲಿ ಮುಕ್ತಾಯಗೊಂಡಿತ್ತು. ಈ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೂ ಡಿಸೆಂಬರ್‌ 30ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಆದೇಶಿಸಿತ್ತು.

ADVERTISEMENT

2011ರ ಜನಗಣತಿ ಆಧಾರದಲ್ಲೇ ಕ್ಷೇತ್ರ ಪುನರ್ವಿಂಗಡಣೆ ನಡೆಸಿ, ಮೀಸಲಾತಿ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರ ಒದಗಿಸಿದ ಮೀಸಲಾತಿ ಪಟ್ಟಿಯ ಆಧಾರದಲ್ಲಿ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

ಡಿ.8ರಿಂದ ನೀತಿ ಸಂಹಿತೆ ಜಾರಿ: ಚುನಾವಣೆ ನಡೆಯುತ್ತಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡಿ.8ರಿಂದ ಡಿ.30ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಆಯೋಗ ತಿಳಿಸಿದೆ.

ವೆಚ್ಚದ ಮಿತಿ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಗರಸಭೆಗಳಲ್ಲಿ ತಲಾ 2 ಲಕ್ಷ, ಪುರಸಭೆಗಳಲ್ಲಿ 1.5 ಲಕ್ಷ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ 1 ಲಕ್ಷ ವೆಚ್ಚದ ಮಿತಿ ನಿಗದಿಪಡಿಸಲಾಗಿದೆ.

57 ಗ್ರಾ.ಪಂ.ಗಳಿಗೂ ಚುನಾವಣೆ: ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ ವಿವಿಧ ಜಿಲ್ಲೆಗಳ 57 ಗ್ರಾಮ ಪಂಚಾಯಿತಿಗಳ 878 ಸದಸ್ಯ ಸ್ಥಾನಗಳು ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ ಹಲವು ಗ್ರಾಮ ಪಂಚಾಯಿತಿಗಳ 386 ಸ್ಥಾನಗಳಿಗೂ ಡಿ.27ರಂದೇ ಚುನಾವಣೆ ನಡೆಯಲಿದೆ.

ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಡಿ.13ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿ.17ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಡಿ.18ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ.20 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಡಿ.27ಕ್ಕೆ ಮತದಾನ ಹಾಗೂ ಅಗತ್ಯಬಿದ್ದರೆ ಡಿ.29ಕ್ಕೆ ಮರು ಮತದಾನ ನಡೆಯಲಿದೆ. ಡಿ.30ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಆಯೋಗ
ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.