ADVERTISEMENT

ಬೆಳಗಾವಿ | ಹನಿಟ್ರ್ಯಾಪ್‌ ಮೂಲಕ ದರೋಡೆಗೆ ಯತ್ನ: ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 3:50 IST
Last Updated 4 ಡಿಸೆಂಬರ್ 2019, 3:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಹನಿಟ್ರ್ಯಾಪ್ ಮೂಲಕ ದರೋಡೆಗೆ ಯತ್ನಿಸಿದ ಗ್ಯಾಂಗ್‌ನಲ್ಲಿದ್ದ 6 ಮಂದಿಯನ್ನು ಇಲ್ಲಿನ ಮಾಳಮಾರುತಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕ್ಯಾಂಪ್‌ನ ಕಾಕರ್‌ ಬೀದಿಯ ಅಲೀಶಾನ್ ಶಾಬುದ್ದಿನ್ ಸೈಯದ್, ಮಾರ್ಕೆಟ್‌ ಬೀದಿಯ ಅಖೀಬ ಅಲ್ಲಾಭಕ್ಷ ಬೇಪಾರಿ, ಬೀಫ್‌ ಬಜಾರ್‌ ಸ್ಟ್ರೀಟ್‌ನ ಸಲ್ಮಾನ ಗುಲಾಜ್ ಬೇಗ, ಒಬ್ಬ ಕಾನೂನು ಸಂಘರ್ಷದಲ್ಲಿರುವ ಬಾಲಕ, ಮಹಾಂತೇಶ ನಗರದ ಬಿಬಿಆಯೇಶಾ ಅಬ್ದುಲ್‌ಸತ್ತಾರ ಶೇಖ ಮತ್ತು ರುಕ್ಮಿಣಿ ನಗರ ಆಶ್ರಯ ಕಾಲೊನಿಯ ಹೀನಾ ಅಕ್ಬರ ಸವನೂರ ಬಂಧಿತರು.

ಅವರಿಂದ ₹ 16,500 ನಗದು, ಕೈಗಡಿಯಾರ, ವಿಡಿಯೊ ಮಾಡಲು ಬಳಸಿದ ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT
ಬೆಳಗಾವಿಯಲ್ಲಿ ಹನಿಟ್ರ್ಯಾಪ್‌ ಮೂಲಕ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವೀರಭದ್ರನಗರದ ಎಂ.ಎಂ. ಮುಜಾವರ ಅವರಿಗೆ ಬಟ್ಟೆ ಅಂಗಡಿಯ ವ್ಯವಹಾರದ ಸಲುವಾಗಿ ಬಿಬಿಆಯೇಶಾ ಶೇಖ ₹ 6 ಲಕ್ಷ ಕೊಡಬೇಕಿತ್ತು. ಸೋಮವಾರ ತಮ್ಮ ವ್ಯವಹಾರಕ್ಕಾಗಿ ಮಹಾಂತೇಶ ನಗರ ಎಸ್‌ಬಿಐ ಬ್ಯಾಂಕ್‌ ಶಾಖೆಗೆ ಬಂದು ಹೋಗುತ್ತಿದ್ದ ಮುಜಾವರ ಅವರನ್ನು ಎದುರಾದ ಬಿಬಿಆಯೇಶಾ ಮತ್ತು ಹೀನಾ ಮನೆಯಲ್ಲಿ ಹಣ ಕೊಡುವುದಾಗಿ ಅವರದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು.

‘ಮನೆಯಲ್ಲಿದ್ದ ಉಳಿದ ‌ಆರೋಪಿಗಳೆಲ್ಲರೂ ಸೇರಿ ಮುಜಾವರ್‌ ಅವರನ್ನು ಕೂಡ ಹಾಕಿ ಬಟ್ಟೆಯನ್ನು ಬಿಚ್ಚಿಸಿ ನಗ್ನಗೊಳಿಸಿ ಅವರ ಬಳಿ ಇದ್ದ ₹ 16,500 ನಗದು, ಕೈಗಡಿಯಾರ ಕಸಿದುಕೊಂಡು ವಿಡಿಯೊ ಮಾಡಿದ್ದರು. ₹ 5 ಲಕ್ಷ ಕೊಡಬೇಕು. ಇಲ್ಲದಿದ್ದಲ್ಲಿ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಕೇಸ್ ಹಾಕುತ್ತೇವೆ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ ಎಂದು ಹೆದರಿಸಿದ್ದರು. ಸದ್ಯಕ್ಕೆ ₹ 2.50 ಲಕ್ಷ ತೆಗೆದುಕೊಂಡು ಬರುವುದಾಗಿ ತಪ್ಪಿಸಿಕೊಂಡು ಬಂದು ದೂರು ನೀಡಿದ್ದರು’ ಎಂದು ಮಾಳಮಾರುತಿ ಠಾಣೆ ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ ತಿಳಿಸಿದ್ದಾರೆ.

ಮಾರ್ಕೆಟ್‌ ಎಸಿಪಿ ಎನ್‌.ವಿ. ಭರಮನಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ತಂಡವನ್ನು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ಶ್ಲಾಘಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.