ADVERTISEMENT

250 ಶಾಲೆಗಳಿಂದ 60 ಸಾವಿರ ವಿದ್ಯಾರ್ಥಿಗಳು ಹೊರಗೆ?

ಹೈಕೋರ್ಟ್‌ಗೆ ಸಮೀಕ್ಷಾ ವರದಿ ಸಲ್ಲಿಸಿದ ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 19:37 IST
Last Updated 18 ಜುಲೈ 2021, 19:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಗೊಂದಲ ಹೈಕೋರ್ಟ್‌ ಅಂಗಳದಲ್ಲಿರುವ ಮಧ್ಯೆಯೇ, ಕೋವಿಡ್‌ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಅನುದಾನರಹಿತ ಖಾಸಗಿ ಶಾಲೆಗಳ ಸಮೀಕ್ಷಾ ವರದಿಯೊಂದನ್ನು ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆ (ಕ್ಯಾಮ್ಸ್) ಬಹಿರಂಗಪಡಿಸಿದೆ. ಅಲ್ಲದೆ, ಈ ವರದಿಯನ್ನು ನ್ಯಾಯಾಲಯಕ್ಕೆ ಶುಕ್ರವಾರ (ಜುಲೈ 16) ಸಲ್ಲಿಸಿದೆ.

ಸಮೀಕ್ಷಾ ವರದಿಯ ಅಂಶಗಳನ್ನು ಸುದ್ದಿಗೋಷ್ಠಿಯಲ್ಲಿ ಭಾನುವಾರ ವಿವರಿಸಿದ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ‘ಸಂಘಟನೆಯಲ್ಲಿ ನೋಂದಣಿಯಾಗಿರುವ ಶಾಲೆಗಳ ಪೈಕಿ,ರಾಜ್ಯದಾದ್ಯಂತ 250 ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 2020-21ನೇ ಸಾಲಿನಲ್ಲಿ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದಿರುವುದು ಗೊತ್ತಾಗಿದೆ. ಈ ವಿದ್ಯಾರ್ಥಿಗಳು ಬೇರೆ ಶಾಲೆಗಳಲ್ಲಿ ದಾಖಲಾಗಿ ಓದುತ್ತಿದ್ದಾರೆಯೇ ಅಥವಾ ನಿರಂತರ ಶಿಕ್ಷಣದಿಂದ ವಂಚಿತರಾಗಿದ್ದಾರೆಯೇ, ಬಾಲ ಕಾರ್ಮಿಕ ಪದ್ಧತಿಗೆ ಅಥವಾ ಬಾಲ್ಯ ವಿವಾಹಕ್ಕೆ ಒಳಗಾಗಿದ್ದಾರೆಯೇ ಎಂಬ ಬಗ್ಗೆ ಯಾರ ಬಳಿಯೂ ಮಾಹಿತಿ ಇಲ್ಲ’ ಎಂದರು.

‘ಸಮೀಕ್ಷೆ ನಡೆಸಿದ ಶಾಲೆಗಳಲ್ಲಿ ಒಟ್ಟು 1.85 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಈ ಪೈಕಿ, ಕಳೆದ ಶೈಕ್ಷಣಿಕ ಸಾಲಿನಲ್ಲಿ ನಾನಾ ರೀತಿಯಲ್ಲಿ ಕನಿಷ್ಠ ಶುಲ್ಕ ಕಟ್ಟಿ ಸುಮಾರು 1.25 ಲಕ್ಷ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಇದು ಕೇವಲ ಮಾದರಿಯಷ್ಟೆ’ ಎಂದ ಅವರು, ‘ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಡಲು ಶಿಕ್ಷಣ ಇಲಾಖೆ ಅನುಸರಿಸುತ್ತಿರುವ ಉಡಾಫೆ ನೀತಿಗಳೇ ಕಾರಣ’ ಎಂದು ಆರೋಪಿಸಿದರು.

ADVERTISEMENT

‘ಕ್ಯಾಮ್ಸ್ ಅಡಿಯಲ್ಲಿ ಸುಮಾರು 3,655 ಶಾಲೆಗಳಿವೆ. ಇದರಲ್ಲಿ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, 55 ಸಾವಿರ ಬೋಧಕ, ಬೋಧಕೇತರರು ಕಾರ್ಯನಿರ್ವಹಿಸುತ್ತಿದ್ದಾರೆ. 2020-21ನೇ ದಾಖಲಾತಿಯಲ್ಲಿ ರಿಯಾಯಿತಿ ನೀಡಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಶುಲ್ಕ ಕಟ್ಟಿದ ವಿದ್ಯಾರ್ಥಿಗಳು ಶೇ 45 ರಷ್ಟು ಮಾತ್ರ. ಶೇ 17ರಷ್ಟು ಪೋಷಕರು ಶೇ 75‌ರಷ್ಟು ಶುಲ್ಕ ಪಾವತಿ ಮಾಡಿದ್ದಾರೆ.‌ ಅಷ್ಟೇ ಪ್ರಮಾಣದ ಪೋಷಕರು ಅರ್ಧದಷ್ಟು ಶುಲ್ಕ ಕಟ್ಟಿದ್ದಾರೆ’ ಎಂದರು.

‘ರಾಜ್ಯದಲ್ಲಿ ಖಾಸಗಿ ಶಾಲೆಗಳು ಶುಲ್ಕ ವಸೂಲಿಗಾಗಿ ದೌರ್ಜನ್ಯ ಎಸಗುತ್ತಿವೆ ಎಂದೇ ಬಿಂಬಿಸಲಾಗಿದೆ. ಆದರೆ, ಸಮೀಕ್ಷೆಗೆ ಒಳಪಟ್ಟಿರುವ ಶಾಲೆಗಳ ಪೈಕಿ 178 ಶಾಲೆಗಳು ಒಂದಲ್ಲ ಒಂದು ರೂಪದಲ್ಲಿ ಸಾಲಕ್ಕೆ ತುತ್ತಾಗಿವೆ. ಇದೇ ಮಾನದಂಡ ಪರಿಗಣಿಸುವುದಾದರೆ, ರಾಜ್ಯದಲ್ಲಿರುವ ಶೇ 90ರಷ್ಟು ಅನುದಾನರಹಿತ ಖಾಸಗಿ ಶಾಲೆಗಳು ಸಾಲದ ಸಂಕಷ್ಟದಲ್ಲಿವೆ’ ಎಂದರು.

‘ಕೋವಿಡ್‌ನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ನಿಜ. ಆದರೆ, ಅವರಿಗೆ ಮನೆ ಬಾಡಿಗೆಯಲ್ಲಿ ವಿನಾಯಿತಿ ಇಲ್ಲ. ವಿದ್ಯುತ್, ನೀರಿನ ಬಿಲ್‌ನಲ್ಲಿ ರಿಯಾಯಿತಿ ನೀಡಿಲ್ಲ. ಕೇವಲ ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವಂತೆ ಸರ್ಕಾರ ಒತ್ತಡ ಹಾಕುತ್ತಿದೆ’ ಎಂದ ಅವರು, ‘ಶಾಲಾ ಶುಲ್ಕ ವಿವಾದ ವಿಚಾರವಾಗಿ ಈಗಾಗಲೇ ಸುಪ್ರೀಂ ಕೋರ್ಟ್ ನ್ಯಾಯ ಸಮ್ಮತ ತೀರ್ಪು ನೀಡಿದೆ. ಅದಕ್ಕೆ ನಾವು ಬದ್ಧವಾಗಿದ್ದೇವೆ. ಹೈಕೋರ್ಟ್ ಕೂಡ ಸುಪ್ರೀಂಕೋರ್ಟ್‌ ತೀರ್ಪಿನಂತೆ ಸಾಮಾಜಿಕ ನ್ಯಾಯದ ತತ್ವದಡಿ ತೀರ್ಪು ಪ್ರಕಟಿಸಿ ಶಿಕ್ಷಣ ವ್ಯವಸ್ಥೆ ಉಳಿಸಲಿದೆ ಎಂಬ ನಂಬಿಕೆಯಿದೆ. ಇದೇ 22 ರಂದು ಶಾಲಾ ಶುಲ್ಕ ವಿವಾದ ವಿಚಾರಣೆಗೆ ಬರಲಿದೆ’ ಎಂದರು.

‘ರಾಜ್ಯ ಸರ್ಕಾರ ಕೂಡಾ ನ್ಯಾಯಾಲಯದ ಕಣ್ಣು ಒರೆಸುವ ಕೆಲಸ ಮಾಡುತ್ತಿದೆ. ಸುಳ್ಳು ಮಾಹಿತಿ ನೀಡಲು ಮುಂದಾಗಿದೆ. ಮಕ್ಕಳು ನಿರಂತರ ಕಲಿಕೆಯಲ್ಲಿ ಭಾಗವಹಿಸದೇ ಇದ್ದರೂ, ಮಕ್ಕಳು ಶಾಲೆಯಲ್ಲೇ ಇದ್ದಾರೆ ಎಂದು ಅಂಕಿ ಅಂಶ ಕೊಟ್ಟು ನಂಬಿಸುತ್ತಿದೆ. ನಮ್ಮಿಂದ ಬಲವಂತವಾಗಿ ದತ್ತಾಂಶವನ್ನು ತುಂಬಿಸುತ್ತಿದ್ದು, ಸರ್ಕಾರದ ನಡೆಯನ್ನು ನಾವು ವಿರೋಧಿಸುತ್ತೇವೆ. ಮಕ್ಕಳು ನಿರಂತರ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ ಎನ್ನುವುದಕ್ಕೆ ಈ ಸಮೀಕ್ಷೆಯೇ ಸಾಕ್ಷಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.