ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ 64 ಮಂದಿ ಒಲವು

ನಗರ, ಗ್ರಾಮೀಣ ಪ್ರದೇಶದಲ್ಲಿ ‘ಗ್ರಾಮ್‌’ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 20:11 IST
Last Updated 23 ಏಪ್ರಿಲ್ 2021, 20:11 IST
   

ಮೈಸೂರು: ‘ಕೋವಿಡ್‌ ಎರಡನೇ ಅಲೆಯ ಸಂಕಷ್ಟದ ನಡುವೆ 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕೇ, ಬೇಡವೇ’ ಎಂಬ ಬಗ್ಗೆ ಗ್ರಾಸ್‌ರೂಟ್ಸ್‌ ರಿಸರ್ಚ್‌ ಆಂಡ್‌ ಅಡ್ವೊಕಸಿ ಮೂವ್‌ಮೆಂಟ್‌ (ಗ್ರಾಮ್) ನಡೆಸಿದ ಸಮೀಕ್ಷೆಯಲ್ಲಿ ‘ಪರೀಕ್ಷೆ ನಡೆಸಬೇಕು’ ಎಂಬುದರತ್ತ ಹೆಚ್ಚಿನವರು ಒಲವು ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 64 ಮಂದಿ ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ. ಶೇ 36 ಮಂದಿ ಕೋವಿಡ್‌ ಎರಡನೇ ಅಲೆ ಕಡಿಮೆ ಯಾಗುವವರೆಗೆ ಪರೀಕ್ಷೆ ಬೇಡ ಎಂದಿದ್ದಾರೆ.

ಪರೀಕ್ಷೆ ನಡೆಸಲು ಒಪ್ಪಿಗೆ ಸೂಚಿಸಿದವರಲ್ಲಿ ಶಿಕ್ಷಕರು (ಶೇ 78) ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶಿಕ್ಷಣ ಕ್ಷೇತ್ರದ ಆಸಕ್ತರು (ಶೇ 65), ವಿದ್ಯಾರ್ಥಿಗಳು (ಶೇ 60) ಮತ್ತು ಪೋಷಕರು (ಶೇ 60) ಇದ್ದಾರೆ. ನಗರ ಪ್ರದೇಶದವರಿಗಿಂತ (ಶೇ 57) ಗ್ರಾಮೀಣ ಪ್ರದೇಶದವರು (ಶೇ 71) ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಲು ಒಲವು ಸೂಚಿಸಿದ್ದಾರೆ.

ADVERTISEMENT

‘ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಬೇಕೇ’ ಎಂಬ ಪ್ರಶ್ನೆಯನ್ನು ಸಮೀಕ್ಷೆ ಯಲ್ಲಿ ಕೇಳಲಾಗಿತ್ತು. ಈ ಪ್ರಶ್ನೆಗೆಶೇ 70 ಮಂದಿ ‘ಬೇಡ’ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಾದ್ಯಂತ ಮೂರು ದಿನ ನಡೆಸಲಾದ ಸಮೀಕ್ಷೆಯಲ್ಲಿ 1,487 ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ 732 ಮಂದಿ ಗ್ರಾಮೀಣ ಪ್ರದೇಶದವರಾಗಿದ್ದರೆ, 750 ಮಂದಿ ನಗರ ಪ್ರದೇಶದವರು. ಸಮೀಕ್ಷೆಯ ವೇಳೆ 606 ವಿದ್ಯಾರ್ಥಿಗಳು, 254 ಶಿಕ್ಷಕರು, 349 ಪೋಷಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ 278 ಮಂದಿಯ ಪ್ರತಿಕ್ರಿಯೆ ಪಡೆಯಲಾಗಿತ್ತು ಎಂದು ‘ಗ್ರಾಮ್‌’ ಪ್ರಕಟಣೆ ತಿಳಿಸಿದೆ.

ಜೂನ್‌ 21ರಿಂದ ಜುಲೈ 5ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ದಿನಾಂಕ ನಿಗದಿಪಡಿಸಿದೆ.

ಸಲಹೆಗಳು

l ಸಾರಿಗೆ ವ್ಯವಸ್ಥೆ ಚೆನ್ನಾಗಿರುವ ಕ್ಲಸ್ಟರ್‌ಗಳಲ್ಲಿ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಬೇಕು

l ಪ್ರತಿ ಶಾಲೆಯಲ್ಲಿಯೂ ಪರೀಕ್ಷಾ ಕೇಂದ್ರ ತೆರೆದರೆ ಕೆಲವೇ ಕೇಂದ್ರಗಳಲ್ಲಿ ದಟ್ಟಣೆ ಹೆಚ್ಚುವುದನ್ನು ತಡೆಯಬಹುದು

l ಪರೀಕ್ಷಾ ಭಯ ನಿವಾರಣೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಕೇಂದ್ರಿತ ಸಹಾಯವಾಣಿ ಆರಂಭಿಸಿ

l ದಿನಕ್ಕೆ ಎರಡು ಪರೀಕ್ಷೆ ನಡೆಸುವ ಬಗ್ಗೆ ಯೋಚಿಸಬಹುದು

ಪರೀಕ್ಷೆ ಇಲ್ಲದಿದ್ದರೂ ಪಾಸ್‌ ಮಾಡಿ

ಪರೀಕ್ಷೆ ನಡೆಸಲು ಸಾಧ್ಯವಾಗದೇ ಇದ್ದರೆ ವಿದ್ಯಾರ್ಥಿಗಳನ್ನು ಮುಂದಿನ ವರ್ಷವೂ ಅದೇ ತರಗತಿಯಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಮುಂದಿನ ತರಗತಿಗೆ ಕಳುಹಿಸಬೇಕೇ ಎಂಬ ಪ್ರಶ್ನೆಯನ್ನೂ ಸಮೀಕ್ಷೆಯಲ್ಲಿ ಕೇಳಲಾಗಿತ್ತು. ಮುಂದಿನ ತರಗತಿಗೆ ತೇರ್ಗಡೆ ಮಾಡಬೇಕು ಎಂದು ಶೇ 80ರಷ್ಟು ಮಂದಿ ಹೇಳಿದ್ದಾರೆ. ತೇರ್ಗಡೆ ಮಾಡಬೇಕು ಎಂದು ಹೇಳಿದವರಲ್ಲಿ ಹೆಚ್ಚಿನವರು ಶಿಕ್ಷಕರು. ಶಿಕ್ಷಕರಲ್ಲಿ ಈ ಪ್ರಮಾಣ ಶೇ 91ರಷ್ಟಿದೆ. ವಿಶೇಷ ಎಂದರೆ, ಶೇ 23ರಷ್ಟು ವಿದ್ಯಾರ್ಥಿಗಳು ಮುಂದಿನ ವರ್ಷವೂ ಇದೇ ತರಗತಿಯಲ್ಲಿ ಇರಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.