
ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
– ಪ್ರಜಾವಾಣಿ ಚಿತ್ರ
ಹಾಸನ: ಕೃಷ್ಣ ಬೈರೇಗೌಡರ ಕಾರ್ಯವೈಖರಿಯಿಂದ ಸರ್ಕಾರದ 6 ನೇ ಗ್ಯಾರಂಟಿಯಾದ ಭೂ ಗ್ಯಾರಂಟಿ ಇಂದು ಸಾಧ್ಯವಾಗಿದೆ. ನೂರಾರು ವರ್ಷಗಳಿಂದ ಬಾಕಿ ಇದ್ದ ಕೆಲಸಗಳಿಗೆ ಮುಕ್ತಿ ನೀಡಲಾಗಿದೆ. ಪ್ರಗತಿಯ ಹಾದಿಯಲ್ಲಿ ಹಾಸನ ಹೊರಟಿದೆ. ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮನುಷ್ಯ ಹುಟ್ಟುವಾಗ ಖಾಲಿ ಕೈಯಲ್ಲಿ ಬರುತ್ತೇವೆ. ಹೋಗುವಾಗ ಪಾಪ–ಪುಣ್ಯ ಬಿಟ್ಟು ಹೋಗುತ್ತೇವೆ. ಅದೇ ರೀತಿ ನಮ್ಮ ಸರ್ಕಾರವು ಸಾಕ್ಷಿಗುಡ್ಡೆಗಳನ್ನುನೀಡಲಿದೆ. ಕೊಟ್ಟ ಮಾತಿನಂತೆ ₹1 ಲಕ್ಷ ಕೋಟಿ ಅನ್ನು ಜನರ ಖಾತೆಗಳಿಗೆ ಕೊಡಲಾಗಿದೆ. ಇಂಧನ ಇಲಾಖೆಯಿಂದ ಪಂಪ್‌ಸೆಟ್‌ಗಳಿಗೆ ವರ್ಷಕ್ಕೆ ₹20 ಸಾವಿರ ಕೋಟಿ ಕೊಡಲಾಗುತ್ತಿದೆ ಎಂದರು.
ಎತ್ತಿನಹೊಳೆ ಯೋಜನೆಯ ನೀರನ್ನು ಹೊರಕ್ಕೆ ತರುವಲ್ಲಿ ಜಿಲ್ಲೆಯ ಅಧಿಕಾರಿಗಳ ಪಾತ್ರ ದೊಡ್ಡದು. ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟ ನಾಲ್ಕೈದು ತಿಂಗಳಲ್ಲಿ ಎತ್ತಿನಹೊಳೆ ನೀರನ್ನು ಬರಪೀಡಿತ ಜಿಲ್ಲೆಗಳಿಗೆ ಹರಿಸುವ ಕೆಲಸ ಮಾಡಲಾಗುವುದು ಎಂದರು.
ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ನಮಗೆ ದೊಡ್ಡ ಜಯ. ಮೇಕೆದಾಟು ಯೋಜನೆ ಕಾರ್ಯಗತವಾದರೆ, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಅನುಕೂಲ ಆಗಲಿದೆ. ಮೇಕೆದಾಟಿನಲ್ಲಿ 400 ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಈ ಯೋಜನೆಯನ್ನು ಯಾವ ರೀತಿ ಆರಂಭಿಸಬೇಕು ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಜೊತೆ ಸೇರಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ನಮ್ಮದು ಅಭಿವೃದ್ಧಿ ಪರ ಸರ್ಕಾರ. ವಿಜಯಪುರದಲ್ಲಿ 1.11 ಲಕ್ಷ ಜನರಿಗೆ ಹಕ್ಕುಪತ್ರ ಕೊಡಲಾಗಿತ್ತು. ಅದೇ ಕೆಲಸವನ್ನು ಹಾಸನದಲ್ಲಿಯೂ ಮಾಡಲಾಗಿದೆ. 142 ಭರವಸೆಗಳನ್ನು ಈಡೇರಿಸಿದ್ದೇವೆ. ರಾಜ್ಯದ ಜನತೆಯ ಕಲ್ಯಾಣದ ಕೆಲಸ ಮುಂದುವರಿಯಲಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಆಶೀರ್ವಾದ ಮಾಡಿದ್ದೀರಿ. ನಿಮ್ಮ ಸೇವೆಗೆ ಸರ್ಕಾರ ಸದಾ ಸಿದ್ಧವಾಗಿದೆ. ಎಲ್ಲ ಇಲಾಖೆಗಳೂ ಹಾಸನದ ಅಭಿವೃದ್ಧಿಗೆ ಬದ್ಧವಾಗಿವೆ ಎಂದರು.
ಹಾಸನಾಂಬೆಯ ದರ್ಶನ ವ್ಯವಸ್ಥೆಗೆ ಕೃಷ್ಣ ಬೈರೇಗೌಡರು ಹೊಸ ರೂಪ ನೀಡಿದರು. ಹಾಸನಾಂಬೆಯ ದರ್ಶನ ಪಡೆದಿದ್ದು, ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ನಮಸ್ಕಾರ ಸಲ್ಲಿಸುತ್ತೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.