ADVERTISEMENT

ಏಳು ಕ್ಷೇತ್ರಗಳಿಗೆ ಒಪ್ಪಿಗೆ ಸೂಚಿಸಿದ ಜೆಡಿಎಸ್‌

ಮೈಸೂರು, ತುಮಕೂರು ನಡುವೆ ಹಗ್ಗಜಗ್ಗಾಟ

ಸಿದ್ದಯ್ಯ ಹಿರೇಮಠ
Published 9 ಮಾರ್ಚ್ 2019, 10:00 IST
Last Updated 9 ಮಾರ್ಚ್ 2019, 10:00 IST
   

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ 12 ಕ್ಷೇತ್ರಗಳಿಗೆ ಬೇಡಿಕೆ ಇರಿಸಿದ್ದ ಜೆಡಿಎಸ್‌, ಇದೀಗ ಏಳು ಕ್ಷೇತ್ರಗಳಿಗೆ ಒಪ್ಪಿಗೆ ಸೂಚಿಸಿದೆ.

ಜೆಡಿಎಸ್‌ನ ಹಾಲಿ ಸದಸ್ಯರಿರುವ ಹಾಸನ, ಮಂಡ್ಯ ಹಾಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಿವಮೊಗ್ಗ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಮ್ಮತಿ ಸೂಚಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌, ಉತ್ತರ ಕರ್ನಾಟಕದ ವಿಜಯಪುರ ಮತ್ತು ಉತ್ತರಕನ್ನಡ ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಮಿತ್ರ ಪಕ್ಷ ಮಾಡಿಕೊಂಡಿರುವ ವಿನಂತಿಗೆ ಒಪ್ಪಿಗೆ ಸೂಚಿಸಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಆದರೆ, ಹಳೆ ಮೈಸೂರು ಭಾಗದ ಮೈಸೂರು, ತುಮಕೂರು, ಬೆಂಗಳೂರು (ಉತ್ತರ) ಕ್ಷೇತ್ರಗಳ ಬೇಡಿಕೆಯ ಕುರಿತು ಚಿಂತನ– ಮಂಥನ ನಡೆಸಿದ್ದ ಕಾಂಗ್ರೆಸ್‌ ರಾಜ್ಯ ಮುಖಂಡರು, ಬೆಂಗಳೂರು (ಉತ್ತರ) ಕ್ಷೇತ್ರ ಬಿಟ್ಟುಕೊಡುವುದಕ್ಕೆ ಸಿದ್ಧರಾಗಿದ್ದಾರೆ.

ADVERTISEMENT

ಕಳೆದ ಚುನಾವಣೆಯಲ್ಲಿ ಜಯಿಸಿರುವ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡುವುದಕ್ಕೂ ಒಪ್ಪಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರ ಬಿಟ್ಟು ಕೊಡದಂತೆ ಪಟ್ಟು ಹಿಡಿದಿದ್ದಾರೆ.

ದೇವೇಗೌಡರು ಮೈಸೂರು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾರೆ. ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಕಾಂಗ್ರೆಸ್‌ ಸಲಹೆ ನೀಡಿದೆ. ಮೈಸೂರು ಬಿಟ್ಟುಕೊಡದಿದ್ದರೆ ತುಮಕೂರು ಕ್ಷೇತ್ರದಿಂದಲಾದರೂ ಸ್ಪರ್ಧೆಗೆ ಅನುವು ಮಾಡಿಕೊಡಬೇಕೆಂದು ಗೌಡರು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಭಯ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಾದ ಡ್ಯಾನಿಷ್‌ ಅಲಿ ಮತ್ತು ಕೆ.ಸಿ. ವೇಣುಗೋಪಾಲ್‌ ಅವರು ಇನ್ನೆರಡು ದಿನಗಳಲ್ಲಿ ದೆಹಲಿಯಲ್ಲೇ ಸಭೆ ನಡೆಸಲಿದ್ದಾರೆ.

ಜೆಡಿಎಸ್‌ ಕ್ಷೇತ್ರಗಳು
ಹಾಸನ, ಮಂಡ್ಯ, ಶಿವಮೊಗ್ಗ, ವಿಜಯಪುರ, ಉತ್ತರಕನ್ನಡ,ಬೆಂಗಳೂರು (ಉತ್ತರ), ತುಮಕೂರು ಅಥವಾ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.