ADVERTISEMENT

75 ಕ್ರೀಡಾಪಟುಗಳ ದತ್ತು ಪಡೆಯಲಾಗಿದೆ: ಸಚಿವ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 13:23 IST
Last Updated 4 ಜನವರಿ 2022, 13:23 IST
ಆದಿಚುಂಚನಗಿರಿ ಮಠದ ಆವರಣದಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಯುವಜನೋತ್ಸವವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು
ಆದಿಚುಂಚನಗಿರಿ ಮಠದ ಆವರಣದಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಯುವಜನೋತ್ಸವವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು   

ಮಂಡ್ಯ: ‘ಅಮೃತ ಕ್ರೀಡಾ ದತ್ತು ಯೋಜನೆ ಅಡಿ ರಾಜ್ಯದ 75 ಕ್ರೀಡಾಪಟುಗಳನ್ನು ದತ್ತು ಪಡೆಯಲಾಗಿದೆ. ಅವರನ್ನು 2024ರ ಒಲಿಂಪಿಕ್ಸ್‌ಗೆ ಕಳುಹಿಸಲು ತರಬೇತಿ ನೀಡಲಾಗುತ್ತಿದೆ' ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ನಾಗಮಂಗಲ ತಾಲ್ಲೂಕು ಆದಿಚುಂಚನಗಿರಿ ಮಠದ ಆವರಣದಲ್ಲಿ ಮಂಗಳವಾರ ಆರಂಭಗೊಂಡ ರಾಜ್ಯಮಟ್ಟದ ಯುವಜನೋತ್ಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ರಾಜ್ಯದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಕ್ರೀಡಾಪಟುಗಳನ್ನು ದತ್ತು ಪಡೆದು ತರಬೇತಿ ನೀಡಲಾಗುತ್ತಿದೆ. ಹಲವು ಖಾಸಗಿ ಸಂಸ್ಥೆಗಳು ಕೂಡ ಸಾಮಾಜಿಕ ಹೊಣೆಗಾರಿಕೆ ಅಡಿ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಮುಂದೆ ಬಂದಿವೆ. ಸರ್ಕಾರಿ– ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾಪಟುಗಳನ್ನು ಒಲಿಂಪಿಕ್ಸ್‌ಗೆ ಸಿದ್ಧಗೊಳಿಸಲಾಗುವುದು’ ಎಂದರು.

ADVERTISEMENT

'ಕಳೆದ ನಾಲ್ಕು ವರ್ಷಗಳಿಂದ ಸ್ಥಗೊತಗೊಂಡಿದ್ದ ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಶೀಘ್ರವೇ ಆರಂಭಿಸಲಾಗುವುದು. ಅಲ್ಲಿ 10 ಮಂದಿಗೆ ಪೈಲಟ್ ತರಬೇತಿ ನೀಡಲಾಗುವುದು. ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಆವರಣದಲ್ಲಿ ಖೇಲೊ ಇಂಡಿಯಾ ಕ್ರೀಡಕೂಟ ಶೀಘ್ರವೇ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ' ಎಂದರು.

ಯುವಜನೋತ್ಸವ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಮಾತನಾಡಿ ‘ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಯುವ ಭಾರತ ಎಂದೇ ಗುರುತಿಸಿಕೊಂಡಿದೆ. ಯುವಜನರು ತಮ್ಮ ಓದಿನ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಆ ಮೂಲಕ ದೇಶವನ್ನು ಸದೃಢಗೊಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.